ಬೆಂಗಳೂರು: ಚಿಕ್ಕಪೇಟೆ ವ್ಯಾಪ್ತಿಯಲ್ಲಿ ತಮ್ಮ ರಾಜಕೀಯ ಚಟುವಟಿಕೆ ಮುಂದುವರೆಸಿರುವ ಕೆಜಿಎಫ್ ಬಾಬು (ಯೂಸುಫ್ ಷರೀಫ್) ಬುಧವಾರ ಕೊಳಗೇರಿ ನಿವಾಸಿಗಳಿಗೆ ಚೆಕ್ ವಿತರಿಸಿದರು. ಬೆಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಳೆಗೇರಿಯ 50 ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿ ಮೊತ್ತದ ಚೆಕ್ಅನ್ನು ವಿತರಣೆ ಮಾಡಿದರು.
ಮಾಜಿ ಶಾಸಕ ಆರ್ ವಿ ದೇವರಾಜ್ ಬದಲು ತಮಗೆ ಕಾಂಗ್ರೆಸ್ ಪಕ್ಷ ಈ ಬಾರಿ ಚಿಕ್ಕಪೇಟೆಯಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಂದೊಮ್ಮೆ ತಮಗೆ ಟಿಕೆಟ್ ನಿರಾಕರಣೆಯಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಪಕ್ಷದ ಶಿಸ್ತು ಸಮಿತಿ ಇವರಿಗೆ ನೋಟಿಸ್ ಜಾರಿ ಮಾಡಿದ್ದು, ಸೂಕ್ತ ಸ್ಪಷ್ಟೀಕರಣ ನೀಡುವಂತೆ ತಿಳಿಸಿದೆ. ಈ ಬೆಳವಣಿಗೆ ಬಳಿಕವೂ ತಮ್ಮ ನಿರ್ಧಾರವನ್ನು ಕೆಜಿಎಫ್ ಬಾಬು ಬದಲಿಸಿಲ್ಲ.
ಇದನ್ನೂ ಓದಿ:ನಾನು ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಕೆಜಿಎಫ್ ಬಾಬು
ಕಾರ್ಯಕ್ರಮದಲ್ಲಿ ಸುಮಾರು 700ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ಚಿಕ್ಕಪೇಟೆ ಸ್ಥಳೀಯ ಲೀಡರ್ ಗಳನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವ ಕೆಜಿಎಫ್ ಬಾಬು, ಒಟ್ಟು 25 ಕೋಟಿ ರೂ. ಚೆಕ್ ವಿತರಣೆ ಮಾಡುವ ಬ್ಯಾನರ್ ಹಾಕಿಕೊಂಡಿದ್ದರು. ಈ ಹಿಂದೆಯೂ ಕೋಲಾರದಲ್ಲಿ ಇದೇ ರೀತಿ ಚೆಕ್ ವಿತರಣೆ ಮಾಡಿದ್ದರು. ಎಂಎಲ್ಸಿ ಚುನಾವಣೆ ವೇಳೆ ಚೆಕ್ ವಿತರಣೆ ಮಾಡಿದ್ದ ಬಾಬು ತಾವು ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಇದೀಗ ಚಿಕ್ಕಪೇಟೆಯತ್ತ ಮುಖ ಮಾಡಿದ್ದಾರೆ.
ಇದು ಪಕ್ಷದ ಕಾರ್ಯಕ್ರಮ ಅಲ್ಲ:ಕಾರ್ಯಕ್ರಮ ಆಯೋಜನೆ ಬಗ್ಗೆ ಉದ್ದೇಶಿಸಿ ಮಾತನಾಡಿದ ಕೆಜಿಎಪ್ ಬಾಬು, ಕೆಜಿಎಪ್ ಬಾಬು ಸುಳ್ಳು ಹೇಳುತ್ತಿದ್ದಾನೆ ಅಂತಾ ಹೇಳ್ತಾರೆ. ಅದಕ್ಕೆ ಇವತ್ತು ಚಿಕ್ಕಪೇಟೆ ಜನರಿಗೆ ಚೆಕ್ ಕೊಡುತ್ತಿದ್ದೇನೆ. ಇದು ಪಕ್ಷದ ಅಡಿಯಲ್ಲಿ ಅಲ್ಲ. ನನ್ನ ಮಗಳ ಫೌಂಡೇಶನ್ ಹೆಸರಲ್ಲಿ ನನ್ನ ಸ್ವಂತ ದುಡ್ಡು ಕೊಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೂ ಈ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ಡಿ ಕೆ ಶಿವಕುಮಾರ್ ಅವರಿಗೆ ನನ್ನ ಮೇಲೆ ಯಾವುದೇ ರೀತಿಯ ಬೇಜಾರಿಲ್ಲ. ನಾನು ಅವರ ಶಿಷ್ಯ, ಆದರೆ ಅವ್ರಿಗೆ ಒತ್ತಡ ಕೆಲವರು ಹಾಕುತ್ತಿದ್ದಾರೆ. ಯಾರು ಏನೇ ಹೇಳಿದ್ರು, ಏನೇ ಒತ್ತಡ ಹಾಕಿದ್ರು ನನ್ನ ಕೆಲಸವನ್ನು ನಾನು ಬಿಡುವುದಿಲ್ಲ ಎಂದು ಕೆಜಿಎಫ್ ಬಾಬು ಘೋಷಿಸಿದರು.