ಬೆಂಗಳೂರು: ಸೆಮಿಕಂಡಕ್ಟರ್ ವಲಯದ ಕೇಯ್ನ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸುವ ಸಂಬಂಧ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸ್ಪಂದಿಸುವುದರಲ್ಲಿ ಸರ್ಕಾರದ ಕಡೆಯಿಂದ ಒಂದು ಸಣ್ಣ ಲೋಪವೂ ಆಗಿಲ್ಲ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಉದ್ಯಮಿ ಮೋಹನ್ ದಾಸ್ ಪೈ ಅವರು ಕೇಯ್ನ್ಸ್ ಟೆಕ್ನಾಲಜೀಸ್ ಕಂಪನಿಯು ಮೈಸೂರಿಗೆ ಬದಲಾಗಿ ತೆಲಂಗಾಣದಲ್ಲಿ ತನ್ನ ಒಎಸ್ಎಟಿ (ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆ್ಯಂಡ್ ಟೆಸ್ಟ್) ಘಟಕದ ನಿರ್ಮಾಣ ಕಾರ್ಯ ಆರಂಭಿಸಿದೆ. ಕರ್ನಾಟಕದ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, 500 ಕೋಟಿ ರೂಪಾಯಿಕ್ಕಿಂತ ಹೆಚ್ಚಿನ ಮೊತ್ತದ ಉದ್ದಿಮೆ ಸ್ಥಾಪನೆ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ಅಗತ್ಯ. ಹೀಗಿದ್ದರೂ, ನಾವು ಕೇಯ್ನ್ಸ್ ಕಂಪನಿಗೆ ಸಮಿತಿ ಸಭೆ ನಡೆಯುವುದಕ್ಕೆ ಮುಂಚಿತವಾಗಿಯೇ ಅನುಮೋದನೆ ಕೊಟ್ಟು ಸರ್ಕಾರಿ ಆದೇಶ (ಜಿಒ) ನೀಡಿದ್ದೆವು. ಇಷ್ಟೆಲ್ಲಾ ಮಾಡಿರುವಾಗ ಸರ್ಕಾರದಿಂದ ವಿಳಂಬ ಧೋರಣೆ ಎಂದು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ನಾಲ್ಕು ತಿಂಗಳಲ್ಲಿ 4,248 ಕೋಟಿ ರೂ ಬಾಕಿ ವಸೂಲಿ ಮಾಡಿ: ಅಧಿಕಾರಿಗಳಿಗೆ ಸಚಿವ ಎಂ ಬಿ ಪಾಟೀಲ್ ಗಡುವು