ಬೆಂಗಳೂರು : 13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ ಕುರಿತಂತೆ ಹೈಕೋರ್ಟ್ ನಿರ್ದೇಶನದಂತೆ ತಮ್ಮ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಕೋರಿ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ವಜಾ ಮಾಡಿದೆ.
ಬೆಂಗಳೂರಿನ ಎಎಂಎಸ್ ಬಡಾವಣೆಯ ಎಂ. ನಳಿನ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತ ಸದಸ್ಯ ಎನ್. ಸಿವಶೈಲಂ ಅವರಿದ್ದ ಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪೋಷಕರು ಅಥವಾ ಪತಿಯ ಆದಾಯ ಪ್ರಮಾಣಪತ್ರ ಪರಿಗಣಿಸುವ ಕುರಿತಂತೆ ಸುಪ್ರೀಂಕೋರ್ಟ್ ಬಡೆಂಗಾ ತಾಲೂಕುದಾರ್ ಮತ್ತು ಟಾಟಾ ಕೆಮಿಕಲ್ಸ್ ನಡುವಿನ ಪ್ರಕರಣದಲ್ಲಿ ನೀಡಿರುವ ತೀರ್ಪು ಈ ಪ್ರಕರಣಕ್ಕೆ ಅನ್ವಯವಾಗುತ್ತದೆ. ಅದರಂತೆ ಅರ್ಜಿದಾರರು ತಮ್ಮ ಮನವಿಗಳನ್ನು ಮಾನ್ಯ ಮಾಡಲು ಯಾವುದೇ ಅಗತ್ಯ ಕಾನೂನಾತ್ಮಕ ದಾಖಲೆಗಳನ್ನು ಅಥವಾ ಆಧಾರಗಳನ್ನು ಒದಗಿಸಿಲ್ಲ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.
ಜೊತೆಗೆ, ಮದುವೆಯಾದವರು ತಮ್ಮ ಪತಿಯ ಜೊತೆ ಬೇರೆ ಕುಟುಂಬದಲ್ಲಿ ವಾಸಿಸುತ್ತಾರೆಯೇ ಹೊರತು, ಪೋಷಕರೊಂದಿಗೆ ವಾಸಿಸುವುದಿಲ್ಲ. ಹಾಗಾಗಿ ಅಭ್ಯರ್ಥಿಗಳ ಮನವಿ ಪುರಸ್ಕರಿಸಲಾಗದು ಎಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಹೇಳಿದೆ.