ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ) ಮತ್ತು ರಾಜ್ಯ ವಿದ್ಯುತ್ ರವಾನೆ ಕೇಂದ್ರ(ಎಸ್‌ಎಲ್‌ಡಿಸಿ)ಗಳು ಅಂತಾರಾಜ್ಯ ವಿದ್ಯುತ್ ಪ್ರಸರಣ ಮತ್ತು ನಿಯಂತ್ರಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ವಿದ್ಯುತ್ ಕಾಯ್ದೆ ಸೆಕ್ಷನ್79(1)(ಏಫ್) ಪ್ರಕಾರ ಅಂತಾರಾಜ್ಯ ಪ್ರಸರಣ ಮತ್ತು ವಿತರಣಗೆ ಸಂಬಂಧಿಸಿದಂತೆ ಕೇಂದ್ರೀಯ ವಿದ್ಯುತ್ ನಿಯಂತ್ರಣಾ ಆಯೋಗ(ಸಿಇಆರ್‌ಸಿ) ಈ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ. ಆದರೆ, ಕೆಇಆರ್‌ಸಿ ಮತ್ತು ಎಸ್‌ಎಲ್‌ಡಿಸಿಗೆ ಈ ಅಧಿಕಾರ ಇಲ್ಲ ಎಂದು ಪೀಠ ತಿಳಿಸಿದೆ. ವಿದ್ಯುತ್ ಕಾಯಿದೆ ಸೆಕ್ಷನ್ 32ರಲ್ಲಿ ಎಸ್‌ಎಲ್‌ಡಿಸಿಯ ಕಾರ್ಯಗಳನ್ನು ವಿವರಿಸಲಾಗಿದೆ. ಸೆಕ್ಷನ್ 33ರ ಪ್ರಕಾರ ಈ ಸಂಸ್ಥೆಗೆ ರಾಜ್ಯದ ಆಂತರಿಕ ವಿಚಾರದಲ್ಲಿ ಮಾತ್ರ ವಿದ್ಯುತ್ ಪ್ರಸರಣ ನಿಯಂತ್ರಿಸಬಹುದಾಗಿದೆ. ಆದರೆ, ಅದು ಅಂತಾರಾಜ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಎಸ್‌ಎಲ್‌ಡಿಯನ್ನು ಕೆಪಿಟಿಸಿಎಲ್ ಅಧೀನದಲ್ಲಿ ಸ್ಥಾಪಿಸಿರುವುದರಿಂದ ಇವೆರಡರ ನಡುವೆ ಕೆಲ ಗೊಂದಲಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಆದೇಶದ ಪ್ರತಿ ಸಿಕ್ಕ ಆರು ವಾರಗಳಲ್ಲಿ ಪ್ರತ್ಯೇಕ ಕಂಪನಿಯೊಂದನ್ನು ರಚನೆ ಮಾಡಬೇಕಾದ ಅಗತ್ಯವಿದೆ ಎಂದು ಪೀಠ ತಿಳಿಸಿದೆ.