ಬೆಂಗಳೂರು: ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಸದ್ಯ ಇಡಿ ಸಂಕಷ್ಟ ಎದುರಾಗಿದೆ. ಸದ್ಯ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಫೋನ್ ಕಾಲ್ ಲಿಸ್ಟ್ ಇಡಿ ಕೈಯಲ್ಲಿದ್ದು, ಬಿನೀಶ್ ಕೊಡಿಯೇರಿಗೆ ಕರೆ ಲಿಸ್ಟ್ಗಳೇ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪದ ಮೇರೆಗೆ ಆಗಸ್ಟ್ನಲ್ಲಿ ಎನ್ಸಿಬಿ ಅನೂಪ್ ಮಹಮ್ಮದ್ನನ್ನು ಬಂಧಿಸಲಾಗಿತ್ತು. ನಂತರ ಆತನ ಸಂಪರ್ಕ ಬಗ್ಗೆ ಮಾಹಿತಿ ಕಲೆಹಾಕಿದಾಗ ಇದೇ ಅನೂಪ್, ಬಿನೀಶ್ ಕೊಡಿಯೇರಿ ಜೊತೆ ಮಾರ್ಚ್ 31 ರಿಂದ ಆಗಸ್ಟ್ 19ರ ವರೆಗೂ ಪರಸ್ಪರ 78 ಬಾರಿ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಡಿಯಿಂದ ಬಿನೀಶ್ ಕೊಡಿಯೇರಿ ವಿಚಾರಣೆ ಅನೂಪ್ ಬಂಧನವಾಗುವ ಮೊದಲು ಆಗಸ್ಟ್ ತಿಂಗಳಲ್ಲಿಯೂ 8 ಬಾರಿ ಕರೆ ಮಾಡಿದ್ದ, ಅಲ್ಲದೆ ಇಬ್ಬರ ನಡುವೆ 19 ರಂದು ಒಂದೇ ದಿನ 5 ಬಾರಿ ಪರಸ್ಪರ ದೂರವಾಣಿ ಸಂಪರ್ಕದಲ್ಲಿ ಮಾತುಕತೆ ನಡೆದಿದೆ ಎಂದು ಹೇಳಲಾಗ್ತಿದೆ.
ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಅನೂಪ್ ವಿಚಾರಣೆ ನಡೆಸಿದಾಗ ಅನೂಪ್ಗೆ 50 ಲಕ್ಷ ರೂ. ಸಾಲವಾಗಿ ಬಿನೀಶ್ ಕೊಟ್ಟಿದ್ದು, ಅದೇ ಹಣದಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಹಾಗೂ ಪಬ್ ತೆರೆಸಿದ್ದ. ಆದರೆ ಲಾಕ್ಡೌನ್ ಹಾಗೂ ಕೊರೊನಾದಿಂದ ರೆಸ್ಟೋರೆಂಟ್ ಹಾಗೂ ಪಬ್ ನಷ್ಟಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ ಎನ್ನಲಾಗ್ತಿದೆ.
ಸದ್ಯ ಇದೆಲ್ಲದರ ಆಧಾರದ ಮೇರೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವ ಇಡಿ ಇಂದು ಬಿನೀಶ್ ಕೊಡಿಗೇರಿಯನ್ನು ತೀವ್ರ ವಿಚಾರಣೆ ಮಾಡಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ.
ಇದರ ಜೊತೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸ್ವಪ್ನಾ ಸುರೇಶ್ ಬಂಧನ ಆಗಿತ್ತು. ಈ ವೇಳೆ ಕೊಚ್ಚಿ ಇಡಿಯಿಂದಲೂ ಬಿನೀಶ್ಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿತ್ತು. ಈಗ ಬೆಂಗಳೂರು ಇಡಿ ಅಧಿಕಾರಿಗಳು ಇದರ ಬಗ್ಗೆ ಕೂಡ ಬಿನೀಶ್ ವಿಚಾರಣೆಯ ವೇಳೆ ಮಾಹಿತಿ ಕಲೆ ಹಾಕಲಿದ್ದಾರೆ. ಈತನ ಬಳಿ ಕೋಟಿ-ಕೋಟಿ ಆಸ್ತಿ ಇರುವ ಮಾಹಿತಿ ಇದ್ದು ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದ್ದಾರೆ.