ಬೆಂಗಳೂರು:ಕೇರಳ ರಾಜ್ಯದ ಕೋಯಿಕ್ಕೋಡ್ ವಿಮಾನ ದುರಂತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.
ನಿನ್ನೆ ರಾತ್ರಿ ಸಂಭವಿಸಿದ ದುರಂತದಲ್ಲಿ ಈಗಾಗಲೇ 18 ಮಂದಿ ಸಾವನ್ನಪ್ಪಿದ್ದು, 127 ಮಂದಿಗೆ ಗಾಯಗೊಂಡಿದ್ದಾರೆ. ಅದರಲ್ಲಿ 40ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಇಂತಹದ್ದೊಂದು ದುರಂತರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದು, ಕೋಯಿಕ್ಕೋಡ್ ನಲ್ಲಿ ಸಂಭವಿಸಿದ ವಿಮಾನ ದುರಂತದ ವಿಷಯ ಕೇಳಿ ತೀವ್ರ ದುಃಖವಾಗಿದೆ. ನೋವಿನ ಈ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕೇರಳದಲ್ಲಿ ವಿಮಾನ ಅಪಘಾತದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಎಲ್ಲಾ ಗಾಯಾಳುಗಳನ್ನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ನಲ್ಲಿ, ಕೇರಳದ ಕೋಯಿಕ್ಕೋಡ್ ನಲ್ಲಿ ವಿಮಾನಾಪಘಾತ ಸಂಭವಿಸಿದೆ. ವಂದೇಭಾರತ್ ಅಭಿಯಾನದ 5ನೇ ಹಂತದಲ್ಲಿ ದುಬೈನಿಂದ ದೇಶಕ್ಕೆ ಮರಳುತ್ತಿದ್ದ ಕೆಲವು ಪ್ರಯಾಣಿಕರು ಮೃತಪಟ್ಟಿರುವ ಮತ್ತು ಹಲವರು ಗಾಯಗೊಂಡಿರುವ ವಿಷಯ ತಿಳಿದು ತುಂಬಾ ನೋವಾಗಿದೆ ಎಂದಿದ್ದಾರೆ.