ಬೆಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಹಾಗು ಥೀಮ್ ಪಾರ್ಕ್ ನಿರ್ಮಾಣ ಸಂಬಂಧ ಸಧ್ಯದಲ್ಲೇ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ಬದಲು ಡಿಸಿಎಂ ಅಶ್ವತ್ಥನಾರಾಯಣ್ ಸಭೆಗಳನ್ನು ನಡೆಸಿದರು. ಸಿಎಂ ಸೂಚನೆ ಮೇರೆಗೆ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ, ರೋರಿಕ್‌ಎಸ್ಟೇಟ್ ಅಭಿವೃದ್ಧಿ, ಫಿಲ್ಮ್ ಸಿಟಿ ನಿರ್ಮಾಣ ಕುರಿತು ಅಧಿಕಾರಿಗಳ ಜೊತೆ ಡಿಸಿಎಂ ಸಭೆ ನಡೆಸಿದರು. ಈ ವೇಳೆ ಯೋಜನಗಳ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಪೇಗೌಡರ 46 ಪಾರಂಪರಿಕ ತಾಣಗಳನ್ನು ಅಭಿವೃದ್ಧಿ ಪಡಿಸುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಮೆ ನಿರ್ಮಿಸುವ ಬಗ್ಗೆ ಚರ್ಚೆ ಆಗಿದೆ. 80 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ನಿರ್ಧರಿಸಿದ್ದು, 40 ಅಡಿ ಅಡಿಪಾಯ, 80 ಅಡಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಕಂಚಿನ ಪ್ರತಿಮೆ ಅಥವಾ ಬೇರೆ ಪ್ರತಿಮೆ ಎನ್ನುವ ಬಗ್ಗೆ ನಿರ್ಧಾರ ಆಗಿಲ್ಲ, ಸ್ಥಳದ ಬಗ್ಗೆಯೂ ಅಂತಿಮ ನಿರ್ಧಾರ ಆಗಬೇಕಿದೆ. ಹಾಗಾಗಿ ಸಧ್ಯದಲ್ಲೇ ಸ್ಥಳ ಅಂತಿಮಗೊಳಿಸಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.