ಬೆಂಗಳೂರು:ನಾಡಿನೆಲ್ಲೆಡೆ ಇಂದು ಕೆಂಪೇಗೌಡರ ಜಯಂತಿ ಆಚರಣೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದ ರಮಣ ಮಹರ್ಷಿ ಪಾರ್ಕ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಉತ್ಸವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪಾಲ್ಗೊಂಡಿದ್ದಾರೆ. ಉತ್ಸವದಲ್ಲಿ ಭಾಗವಹಿಸಿದ ನಂತರ, ತಮಗೂ ಬೆಂಗಳೂರಿಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.
ನನಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಆದರೆ ಅದು ಮಾಜಿ ಡಿಸಿಎಂ ಡಾ. ಅಶ್ವತ್ ನಾರಾಯಣಗೆ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಾನು 6ನೇ ವಯಸ್ಸಿಗೆ ಶಿಕ್ಷಣಕ್ಕಾಗಿ ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದ್ದೆ ಎಂದರು.
"ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪದ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆ ಇದೆ. ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನೂ ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೂ ಇರುವ ಸಂಬಂಧ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ ನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಆ ರೀತಿ ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ" ಎಂದು ಮಾಜಿ ಸಚಿವ ಅಶ್ವತ್ ನಾರಾಯಣ ಅವರಿಗೆ ತಿರುಗೇಟು ನೀಡಿದರು.
ಇಂದು ನಾವು ಕೆಂಪೇಗೌಡ ಜಯಂತಿ ನಾವು ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದಾಗ ಯಾವ ದಿನ ಜಯಂತಿ ಆಚರಿಸಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆಗ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ, ಇತಿಹಾಸ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು. ಈ ಸಮಿತಿ ಅಧ್ಯಯನ ಮಾಡಿ ಜೂನ್ 27ರಂದು ಕೆಂಪೇಗೌಡ ಜಯಂತಿ ಎಂದು ತೀರ್ಮಾನಿಸಿತು. ಅಂದಿನಿಂದ ಸರ್ಕಾರ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದೆ ಎಂದರು.
ಕೆಂಪೇಗೌಡ ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ: ಆರ್. ಅಶೋಕ್ ಅವರ ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ಕೆಂಪೇಗೌಡ ಜಯಂತಿ ಆಚರಣೆಯನ್ನು ರಾಜ್ಯಕ್ಕೆ ವಿಸ್ತರಿಸಿ, ರಾಜ್ಯದ ಎಲ್ಲೆಡೆ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಿದೆವು. ಇಂದು ಬೆಂಗಳೂರಿನಲ್ಲಿ ಹಾಗೂ ಹಾಸನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ. ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ ಶೇ 75ಕ್ಕಿಂತ ಹೆಚ್ಚು ಒಕ್ಕಲಿಗರು ಇದ್ದಾರೆ. ಇದನ್ನು ನೋಡಿ ನನಗೆ ನಾಚಿಕೆ ಆಯಿತು. ಕೆಂಪೇಗೌಡ ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ವಿವರಿಸಿದರು.
ಕೆಂಪೇಗೌಡರ ಆಚಾರ ವಿಚಾರ ಜಾತಿ ಮೇಲೆ ನಿಂತಿರಲಿಲ್ಲ. ಅವರು ಒಂದು ವೇಳೆ ಜಾತಿ ಮೇಲೆ ಕೆಲಸ ಮಾಡಿದ್ದರೆ, ಬೆಂಗಳೂರಿನಲ್ಲಿ 52 ವಿವಿಧ ಸಮುದಾಯಗಳ ಪೇಟೆಗಳು ಆಗುತ್ತಿರಲಿಲ್ಲ. ಸಮಾಜದಲ್ಲಿ ಎಲ್ಲ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ. ಇಂದು ನಾವು ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮೂವರು ಮಹನೀಯರನ್ನು ಸ್ಮರಿಸಬೇಕು, ಅದು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ. ಇವರು ಕಟ್ಟಿರುವ ಬೆಂಗಳೂರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆಂಪೇಗೌಡರ ಸ್ತಂಭ ಹೇಗೆ ಸ್ಮಾರಕವಾಗಿದೆಯೋ ಅದೇ ರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿ ಗುಡ್ಡೆ ನಿರ್ಮಿಸಬೇಕು. ಬೆಂಗಳೂರು ಕೆಲವು ಭಾಗಗಳು ಮಾತ್ರ ಯೋಜಿತ ನಗರವಾಗಿದ್ದು, ಉಳಿದ ಭಾಗಗಳು ಯೋಜನೆ ರಹಿತವಾಗಿ ಬೆಳೆದುಕೊಂಡಿದೆ. ಇಲ್ಲಿನ ಹವಾಮಾನದಲ್ಲಿ ಬದುಕಿದವರು ಇದನ್ನು ಬಿಟ್ಟು ಹೋಗುವುದಿಲ್ಲ ಎಂದರು.