ದೇವನಹಳ್ಳಿ (ಬೆಂಗಳೂರು ಗ್ರಾ) :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಕಳೆದ ಜನವರಿ 15ರಿಂದ ಕೆಲವು ವಿಮಾನಗಳ ಹಾರಾಟ ಮಾತ್ರ ಶುರುವಾಗಿತ್ತು. ಆದರೆ ಆಗಸ್ಟ್ 31ರಿಂದ ಹೊಸ ಟರ್ಮಿನಲ್‌ನಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನಗಳ ಹಾರಾಟ ನಡೆಯಲಿದೆ.
ದೇಶೀಯ ವಿಮಾನಯಾನ ನಡೆಸುವ ಮೂರು ಸಂಸ್ಥೆಗಳಾದ ಸ್ಟಾರ್ ಏರ್, ವಿಸ್ತಾರ, ಏರ್ ಏಶಿಯಾ ವಿಮಾನಗಳು ಮಾತ್ರ ಟಿ2ನಿಂದ ಹಾರಾಟ ನಡೆಸುತ್ತಿದ್ದವು. ಆಗಸ್ಟ್ 31ರಂದು ಬೆಳಗ್ಗೆ 10:45ರಿಂದ ಈ ಟರ್ಮಿನಲ್‌ನಿಂದ ಎಲ್ಲಾ ವಿಮಾನಗಳ ಹಾರಾಟಕ್ಕೆ ಸಿದ್ಧತೆ ನಡೆದಿದೆ. ಈ ಕುರಿತು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಾಹಿತಿ ನೀಡುವ ನಾಮಫಲಕ, ಪ್ಲೆಕ್ಸ್ ಅಳವಡಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿ 15 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಹಲವು ವಿಶೇಷತೆಗಳು ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅಂತಾರಾಷ್ಟ್ರೀಯ 28 ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟ ಟಿ2ನಲ್ಲಿ ಆರಂಭವಾಗಲಿದ್ದು, ಟರ್ಮಿನಲ್ 2ರ ಅತ್ಯಾಧುನಿಕ ತಂತ್ರಜ್ಞಾನವನ್ನ ವಿದೇಶಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ಕೆಐಎ ಟರ್ಮಿನಲ್ 1 ರಲ್ಲಿ ದೇಶೀಯ ಕೆಲವು ವಿಮಾನಗಳು ಹಾಗೂ ಕಾರ್ಗೋ ಮಾತ್ರ ಹಾರಾಟ ನಡೆಸುತ್ತದೆ. ಟಿ2ಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು ಶಿಫ್ಟ್ ಆಗಲಿವೆ.
ಟರ್ಮಿನಲ್ 2 ವಿಶೇಷತೆ: ಈ ಟರ್ಮಿನಲ್ ಉದ್ಯಾನವನದಂತೆ ಸಿಂಗಾರಗೊಂಡಿದೆ. ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಮೈದಳೆದಿದೆ. ಸಸ್ಯ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದು. ಸಸ್ಯಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವೂ ಕಾಣಸಿಗುತ್ತದೆ.