ಬೆಂಗಳೂರು: ಇದೇ ಮೊದಲ ಬಾರಿಗೆ ಸದನದಲ್ಲಿ ಅರ್ಕಾವತಿ ಬಡಾವಣೆ ಅಕ್ರಮದ ಮೇಲಿನ ನ್ಯಾ.ಕೆಂಪಣ್ಣ ಆಯೋಗದ ವರದಿಯ ಅಂಶವನ್ನು ಸಿಎಂ ಬಸವರಾಜ ಬೊಮ್ಮಾಯಿ ಉಲ್ಲೇಖಿಸುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಜೆಟ್ ಚರ್ಚೆ ವೇಳೆ ಅರ್ಕಾವತಿ ಬಡಾವಣೆಯಲ್ಲಿ ಸ್ವಲ್ಪ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ ಎಂದಿದ್ದರು. ಹಾಗಾಗಿ ನಾನು ಕೆಂಪಣ್ಣ ಆಯೋಗ ವರದಿಯನ್ನು ಪ್ರಸ್ತಾಪಿಸುತ್ತಿದ್ದೇನೆ. ಅವರೇ ಕೆಂಪಣ್ಣ ಆಯೋಗ ರಚನೆ ಮಾಡಿದ್ದರು. ಆಯೋಗ ವರದಿ ಕೊಟ್ಟ ಮೇಲೆ ಅಂದಿನ ಸಂಪುಟ ಸಭೆಯಲ್ಲಿ ಅದನ್ನು ಚರ್ಚಿಸಿದ್ದರು. ಬಳಿಕ ಸದನದಲ್ಲಿ ಮಂಡಿಸದೇ ಮುಚ್ಚಿಟ್ಟಿದ್ದರು ಎಂದರು.
ಈ ವೇಳೆ ನ್ಯಾ.ಕೆಂಪಣ್ಣ ಆಯೋಗದ ವರದಿಯ ಅಂಶಗಳನ್ನು ಮೊದಲ ಬಾರಿಗೆ ಸದನದಲ್ಲಿ ಉಲ್ಲೇಖಿಸಿದರು. ಡಿನೋಟಿಫಿಕೇಷನ್ಗೆ ಇನ್ನೊಂದು ಹೆಸರು ಕೊಟ್ಟು ನೂರಾರು ಎಕರೆ ಜಮೀನನ್ನು ಕೈ ಬಿಟ್ಟಿದ್ದಾರೆ. 868 ಭೂ ಪ್ರದೇಶವನ್ನು ಕೈ ಬಿಡಲಾಗಿದೆ. ಹೈ ಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ಆ ಮೂಲಕ ಸಂಬಂಧಿತ ಭೂ ಮಾಲೀಕರಿಗೆ ಲಾಭ ಮಾಡುವ ಉದ್ದೇಶದಿಂದ ಭೂ ಸ್ವಾಧೀನದಿಂದ ಭೂಮಿಯನ್ನು ಕೈ ಬಿಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದು ನಿಯಮದ ಉಲ್ಲಂಘನೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿದರು.
ಸಂಪೂರ್ಣ ಯೋಜನೆಯಲ್ಲಿ ಹಗರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಕಾವತಿ ಅಕ್ರಮದ ಮೇಲಿನ ಕೆಂಪಣ್ಣ ಆಯೋಗ ವರದಿಯಲ್ಲಿರುವುದನ್ನು ನಾನು ಉಲ್ಲೇಖಿಸಿದ್ದೇನೆ. ಅದನ್ನು ನಾನು ಹೇಳುತ್ತಿಲ್ಲ ಎಂದರು. ಈ ವೇಳೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ವರದಿಯನ್ನು ಸದನದಲ್ಲಿ ಮಂಡಿಸದ ಬಗ್ಗೆ ಆಕ್ಷೇಪಿಸಿತು. ಸದನದಲ್ಲಿ ವರದಿ ಮಂಡಿಸದೇ ಆಯೋಗದ ವರದಿ ಅಂಶಗಳನ್ನು ಹೇಳಿರುವ ಬಗ್ಗೆ ಆಕ್ಷೇಪಿಸಿದರು. ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಅರ್ಕಾವತಿ ರಿಡೂ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಬೆಂಚ್ ಕುಟ್ಟಿ ಆಡಳಿತ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.
ನಿನ್ನೆ ವಿರೋಧ ಪಕ್ಷ ನಾಯಕರೇ ಅರ್ಕಾವತಿ ಬಡಾವಣೆ ಬಗ್ಗೆ ಪ್ರಸ್ತಾಪ ಮಾಡಿದರು. ಅದಕ್ಕೆ ನಾನು ಆಯೋಗದ ವರದಿಯನ್ನು ಉಲ್ಲೇಖಿಸಿದ್ದೇನೆ. ನಾನು ಆಯೋಗದ ಸಂಪೂರ್ಣ ವರದಿ ಉಲ್ಲೇಖಿಸಿಲ್ಲ. ನಾನು ಕೇವಲ ಕೆಲವು ಅಂಶವನ್ನು ಉಲ್ಲೇಖಿಸಿದ್ದೇನೆ. ಇದು ಕಾಂಟ್ರಾಕ್ಟರ್ ಕೆಂಪಣ್ಣ ವರದಿಯಲ್ಲ. ನಾನು ಜಸ್ಟೀಸ್ ಕೆಂಪಣ್ಣ ವರದಿ ಬಗ್ಗೆ ಹೇಳುತ್ತಿದ್ದೇನೆ. ನೀವು ಕಾಂಟ್ರಾಕ್ಟರ್ ಕೆಂಪಣ್ಣ ಬಗ್ಗೆ ಹೇಳಿ ಅಲ್ಲಾಡಿಸುತ್ತಿದ್ದೀರಿ. ನಾವು ಜಸ್ಟೀಸ್ ಕೆಂಪಣ್ಣ ಹೇಳಿರುವ ವರದಿಯನ್ನು ಉಲ್ಲೇಖಿಸಿದ್ದೇನೆ. ಇದು ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ವಿಜಯೇಂದ್ರ ಅಪ್ತನಿಗೆ ಸಂಸದ ಪ್ರಸಾದ್ ಠಕ್ಕರ್: ಬಿಎಸ್ವೈ ಹೆಸರು ದುರ್ಬಳಕೆ ಎಂದ ಕಾಡಾ ಅಧ್ಯಕ್ಷ