ಕರ್ನಾಟಕ

karnataka

By

Published : Jun 18, 2021, 12:49 PM IST

ETV Bharat / state

ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ : ಹೆಚ್​ಡಿಕೆ

ರಾಜ್ಯದ ಮತ್ತು ಅಕ್ಕಪಕ್ಕದ ರಾಜ್ಯಗಳ ಆಗುಹೋಗುಗಳ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿದೆಯೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

kd kumaraswamy
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂತಹ ಹೆಜ್ಜೆ ಇಟ್ಟಿದೆ. ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲ, ಜಲ, ಭಾಷೆ,–ನುಡಿಯ ಬಗ್ಗೆ ಅಕ್ಕರೆ ಇದ್ದೀತೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ, ಈ ವರ್ಷ ತಮಿಳುನಾಡಿಗೆ ಸಿಗಬೇಕಾದ ನೀರಿನ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ ಎಂದು ಟೀಕಿಸಿದ್ದಾರೆ.

ಮೇಕೆದಾಟು ಅಣೆಕಟ್ಟು ಯೋಜನೆ ರೂಪಿಸಲು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಗಿರಲಿಲ್ಲ. ನನ್ನ ಸರ್ಕಾರ ಅದನ್ನು ಜಾರಿಗೆ ತಂದು ಧೈರ್ಯ ತೋರಿತು. ಆದರೆ, ಅದನ್ನು ಉಳಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ರಾಜ್ಯ,–ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯೋಜನೆ ಅನಿಶ್ಚಿತತೆ ಎದುರಿಸುತ್ತಿದೆ. ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಜನ ಗಮನಿಸಬೇಕು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದು ಪ್ರಾದೇಶಿಕ ಪಕ್ಷ. ಪ್ರಾದೇಶಿಕತೆ, ಅಸ್ಮಿತೆ ವಿಚಾರದಲ್ಲಿ ತಮಿಳುನಾಡು ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರದಲ್ಲಿದ್ದರೂ ರಾಜ್ಯದ ಅಸ್ಮಿತೆ, ಪ್ರಾದೇಶಿಕತೆ ರಕ್ಷಣೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಹಿತರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಅಗತ್ಯ ಎಂದಿದ್ದಾರೆ.

ಸ್ಟಾಲಿನ್‌ ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ. ದಕ್ಷಿಣ ಭಾರತದ ರಾಜ್ಯಗಳ, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ವಿಚಾರದ ಮೂಲಕ ಒಡೆದುಹೋಗಬಾರದು. ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್‌ ಗಮನಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯವನ್ನು ಆಗಲು ಬಿಡಲಿ. ಇದರಿಂದ ತಮಿಳುನಾಡಿಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಇದು ನೀರಾವರಿ ಉದ್ದೇಶದ ಯೋಜನೆಯಲ್ಲ. ಬದಲಿಗೆ ಕುಡಿಯುವ ನೀರಿನ ಉದ್ದೇಶದ ಯೋಜನೆಯಾಗಿದೆ. ಈ ವಿಚಾರವನ್ನು ಸ್ಟಾಲಿನ್‌ ಅವರು ಗಮನಿಸಬೇಕು. ಜಲಾಶಯದ ವಿಚಾರದಲ್ಲಿ ಕರ್ನಾಟಕದೊಂದಿಗೆ ಸಹಕರಿಸಬೇಕು. ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ತಮಿಳುನಾಡಿಗೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಕೊಟ್ಟಿದೆ. ಪಕೃತಿ ಸಹಕರಿಸಿದಾಗ ಹೆಚ್ಚಿನ ನೀರನ್ನು ಹರಿಸಿದೆ. ಬರಗಾಲದಂತಹ ಸಂದರ್ಭದಲ್ಲೂ ಕರ್ನಾಟಕವು ತಮಿಳುನಾಡಿಗೆ ಎಂದೂ ದ್ರೋಹ ಬಗೆದಿಲ್ಲ. ಹೀಗಾಗಿ ನೀರಿನ ಹಂಚಿಕೆ ವಿಚಾರದಲ್ಲಿ ಸೋದರ ಸ್ಟಾಲಿನ್ ಅವರಿಗೆ ಯಾವ ಅನುಮಾನಗಳೂ, ಆತಂಕಗಳೂ ಬೇಡ ಎಂದಿದ್ದಾರೆ.

ಇದನ್ನೂ ಓದಿ:38ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಮೂಲಕ ಬೆಂಗಳೂರು ತಲುಪಿದ 77.39 ಟನ್ ಪ್ರಾಣವಾಯು

ತಮಿಳುನಾಡು ರೈತರನ್ನು ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ. ರೈತರೆಂದರೆ ರೈತರೇ, ಭೂಮಿ ತಾಯಿಯ ಮಕ್ಕಳು. ನಮ್ಮ ಅಣ್ಣ ತಮ್ಮಂದಿರು. ಕಾವೇರಿ ವಿಚಾರದಲ್ಲಿ ಈಗ ನಾವಿಬ್ಬರು, ಅಂದರೆ ರಾಜಕಾರಣಿಗಳೂ ಅಣ್ಣ ತಮ್ಮಂದಿರಾಗೋಣ. ಸೋದರ ಭಾವನೆಯೊಂದಿಗೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಬಂದರೆ ನಾನಂತೂ ಎರಡು ಹೆಜ್ಜೆ ಮುಂದಿಡುವೆ ಎಂದು ಹೇಳಿದ್ದಾರೆ.

ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ನಾವು ಒಗ್ಗಟ್ಟಾಗೇ ಉಳಿಯಬೇಕು. ಸ್ಟಾಲಿನ್ ಅವರ ಅಧಿಕಾರವಧಿಯಲ್ಲಿ ಈ ಪ್ರಯತ್ನ ಆಗಲಿ. ಅದಕ್ಕೆ ನನ್ನ ಬೆಂಬಲ ಇರಲಿದೆ. ಈ ರಾಜ್ಯಗಳ ಸೋದರತೆ ರಕ್ಷಣೆ ಈಗಿನ ಅಗತ್ಯ ಎಂದು ಹೇಳಿದ್ದಾರೆ.

ABOUT THE AUTHOR

...view details