ಬೆಂಗಳೂರು: ಆರೋಗ್ಯ ತುರ್ತುಪರಿಸ್ಥಿತಿಯಾದ ಕೋವಿಡ್ ಸಮಯದಲ್ಲಿ ದುಡಿದು, ಲಕ್ಷಾಂತರ ಜನರ ಆರೋಗ್ಯ ಕಾಪಾಡಿದ ಕೋವಿಡ್ ವಾರಿಯರ್ಗಳ ನೆರವಿಗೆ ಕಾವೇರಿ ಆಸ್ಪತ್ರೆ ಮುಂದೆ ಬಂದಿದೆ.
ಕೃತಜ್ಞಾ ಕಾರ್ಯಕ್ರಮದ ಹೆಸರಿನಡಿ ನಗರದ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಆಸ್ಪತ್ರೆ ವೈದ್ಯರು, ನರ್ಸ್, ಸೆಕ್ಯೂರಿಟಿ ಅಥವಾ ಶವಸಂಸ್ಕಾರಕ್ಕೆ ನೆರವಾದವರನ್ನು ಗುರುತಿಸಿ, ಆಸ್ಪತ್ರೆ ಬಳಿಯೇ ಹೋಗಿ ಸನ್ಮಾನ ಹಾಗೂ ಪ್ರಶಸ್ತಿ ನೀಡಲು ಆಸ್ಪತ್ರೆ ಮುಂದಾಗಿದೆ.
ಈ ಕಾರ್ಯಕ್ರಮಕ್ಕೆ ಇಂದು ನಟ ರಮೇಶ್ ಅರವಿಂದ್ ಚಾಲನೆ ನೀಡಿದರು. ಇಂದಿನಿಂದಲೇ ವಿಕ್ಟೋರಿಯಾ, ಕೆ.ಸಿ ಜನರಲ್ ಆಸ್ಪತ್ರೆ ಬಳಿ ಹೋಗಿ ಗುರುತಿಸಿರುವ ಕೋವಿಡ್ ವಾರಿಯರ್ಗಳಿಗೆ ಸನ್ಮಾನ ಮಾಡುವುದು. ಅಥವಾ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಕೋವಿಡ್ ವಾರಿಯರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಎರಡು ಲಕ್ಷ ರೂ ಹಾಗೂ ಅವರು ಓದಿದ ಪದವಿಯ ಹಿನ್ನಲೆಯಲ್ಲಿ ಕೆಲಸ ನೀಡುವ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ.
ಈ ತಂಡದಲ್ಲಿ 8 ಜನ ತಜ್ಞ ವೈದ್ಯರಿದ್ದು, ಈ ತಂಡ ಆಯ್ಕೆ ಮಾಡುವ ವಾರಿಯರ್ಗಳಿಗೆ ಪ್ರಶಸ್ತಿ ನೀಡುವುದು, ಕೋವಿಡ್ ಸಮಯದಲ್ಲಾದ ಉತ್ತಮ ಸಂಶೋಧನೆಗಳಿಗೆ ಇನ್ನೋವೇಷನ್ ಅವಾರ್ಡ್ ನೀಡುವುದು ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.