ಬೆಂಗಳೂರು :ಪ್ರತಿಪಕ್ಷ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದ್ದು ಧ್ವನಿಮತದ ಮೂಲಕ ಗೆಲುವು ಸಾಧಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಕಟೀಲ್, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಸದನದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸೋಲುಣಿಸಿ ವಿಶ್ವಾಸ ಗೆದ್ದಿದ್ದೀರಿ, ನಿಮಗೆ ಪಕ್ಷದವತಿಯಿಂದ ಅಭಿನಂದನೆ ಎನ್ನುತ್ತಾ ಸಿಎಂಗೆ ಶಾಲು ಹೊದಿಸಿ ಸನ್ಮಾನಿಸಿದರು.
ರಾಜಕೀಯ ದುರುದ್ದೇಶದಿಂದ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ ಪಕ್ಷಕ್ಕೆ ಸೋಲುಂಟಾಗಿದೆ. ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿಜಯದ ನಡೆ ನಿರಾತಂಕವಾಗಿ ಮುಂದುವರೆಯಲಿ ಎಂದು ಹಾರೈಸಿದರು.
ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಸಚಿವ ಸಿ ಟಿ ರವಿ ಅವರಿಗೂ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಬ್ಬರೂ ಸಚಿವರಿಗೆ ಅಭಿನಂದಿಸಿ ಹೊಸ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವಂತೆ ಶುಭ ಕೋರಿದರು.