ಬೆಂಗಳೂರು: ಭಯೋತ್ಪಾದನೆ, ಕ್ರಿಮಿನಲ್ ಚಟುವಟಿಕೆ ಮತ್ತು ಗೂಂಡಾ ರಾಜಕೀಯದಂಥ ದೇಶ ವಿರೋಧಿ ಚಟುವಟಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ, ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಭಾಗಿಯಾದವರಿಂದ ವಿವರಣೆ ಕೇಳಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಯಾವುದೋ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ನಮ್ಮವರು ಪಾಲ್ಗೊಂಡಿದ್ದನ್ನು ಗಮನಿಸಿದ್ದೇನೆ. ಆ ಕುರಿತಂತೆ ವಿವರಣೆ ಕೇಳಿದ್ದೇನೆ. ಯಾವುದೇ ಕಾರಣಕ್ಕೂ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ. ಇಲ್ಲಿಗೆ ಈ ವಿಷಯಕ್ಕೆ ಮುಕ್ತಾಯ ಹಾಕುತ್ತೇನೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಯಾರ ಶಿಷ್ಯ? ಎಲ್ಲಿಂದ ರಾಜಕಾರಣಕ್ಕೆ ಬಂದರು ಎಂದು ನಾನೇನೂ ಬಹಿರಂಗ ಪಡಿಸಬೇಕಿಲ್ಲ. ಡಿ.ಕೆ.ಶಿವಕುಮಾರ್ ಇತಿಹಾಸ, ವ್ಯವಸ್ಥೆಗಳು, ರಕ್ತಸಿಕ್ತ ಕಾಂಗ್ರೆಸ್‍ನ ಚಟುವಟಿಕೆಗಳು ನನಗಿಂತ ಹೆಚ್ಚಾಗಿ ಬೆಂಗಳೂರಿನ ಜನರಿಗೆ ತಿಳಿಸಿದೆ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ದೆಹಲಿ ಸೇರಿ ದೇಶದಲ್ಲಿ ಸಿಖ್ಖರ ನರಮೇಧ ಯಾರು ಮಾಡಿದ್ದಾರೆ ಎಂಬುದಕ್ಕೆ ನಾವೇನೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಹಿಂದೆ ಬಾಣಲೆಯಲ್ಲಿ ಬೆಂಕಿ ಹಾಕಿ ಯಾರನ್ನೋ ಸುಟ್ಟಿದ್ದಕ್ಕೆ ಕಾಂಗ್ರೆಸ್‍ನಲ್ಲಿ ಉದಾಹರಣೆಗಳಿವೆ ಎಂದು ಅವರು ನುಡಿದರು.