ಕರ್ನಾಟಕ

karnataka

ETV Bharat / state

ಕೆಎಎಸ್ ಅಧಿಕಾರಿಗಳ ನೇಮಕಾತಿ ಅಕ್ರಮ: ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ

ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡು ಪರಿಷ್ಕೃತ ಆಯ್ಕೆ ಪಟ್ಟಿಗಳನ್ನು ಕೆಎಟಿ 2020ರ ಅ.6ರಂದು ರದ್ದುಗೊಳಿಸಿತ್ತು. ಹೈಕೋರ್ಟ್‌ ನೀಡಿರುವ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 2021ರ ಜ. 30ರಂದು ಪ್ರಕಟಿಸಿರುವ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೆಎಟಿ ಆದೇಶಿಸಿದೆ.

ಕೆಪಿಎಸ್​ಸಿಗೆ ಕೆಎಟಿ ಆದೇಶ
ಕೆಪಿಎಸ್​ಸಿಗೆ ಕೆಎಟಿ ಆದೇಶ

By

Published : Feb 15, 2021, 10:54 PM IST

ಬೆಂಗಳೂರು: 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ಅಕ್ರಮ ನೇಮಕ ಪ್ರಕರಣದ ಸಂಬಂಧ ಹೈಕೋರ್ಟ್‌ ನೀಡಿರುವ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 2021ರ ಜ. 30ರಂದು ಪ್ರಕಟಿಸಿರುವ ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.

ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಐಎಎಸ್ ಅಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಬಿಬಿಎಂಪಿ ಜಂಟಿ ಆಯುಕ್ತ ಕೆ. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ಕೆಎಟಿ ಅಧ್ಯಕ್ಷ ನ್ಯಾ. ಆರ್.ಬಿ. ಬೂದಿಹಾಳ್ ಮತ್ತು ಆಡಳಿತ ಸದಸ್ಯ ಎನ್. ಶಿವಶೈಲಂ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.

ಓದಿ: ವಕೀಲರ ಸಂಘಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡುವಂತೆ ಪತ್ರ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡು ಪರಿಷ್ಕೃತ ಆಯ್ಕೆ ಪಟ್ಟಿಗಳನ್ನು ಕೆಎಟಿ 2020ರ ಅ.6ರಂದು ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಕೆಪಿಎಸ್​ಸಿ ಮತ್ತು ಇತರೆ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ ವಿಭಾಗೀಯಪೀಠ ಕೆಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಆದರೂ ಆಯೋಗ ಮತ್ತೆ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಕಾನೂನು ಬಾಹಿರ ಎಂದು ಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ: ಹೈಕೋರ್ಟ್ ವಿಭಾಗೀಯಪೀಠ 2016ರ ಜೂ. 21ರಂದು ನೀಡಿದ್ದ ತೀರ್ಪಿನ ಮೂರನೇ ನಿರ್ದೇಶನದಲ್ಲಿ 91 ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಅಂಕ ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ ಆಯೋಗ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಗಣಿಸಿ 2019ರ ಆ. 22ರಂದು ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆಗ ಹಲವು ಅಭ್ಯರ್ಥಿಗಳು ಆಯೋಗದ ದೋಷ ಮುಂದಿಟ್ಟುಕೊಂಡು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಹೂಡಿದ್ದರು. ಆ ಬಗ್ಗೆ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಾಗ ಕೆಪಿಎಸ್‌ಸಿ ತನ್ನ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿ, 2021ರ ಜ.30ರಂದು ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ABOUT THE AUTHOR

...view details