ಕರ್ನಾಟಕ

karnataka

ETV Bharat / state

ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ: ನಿರ್ಣಯ ಹಿಂಪಡೆದ ಹುಬ್ಬಳ್ಳಿ ವಕೀಲರ ಸಂಘ - ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ: ನಿರ್ಣಯ ಹಿಂಪಡೆದ ಹುಬ್ಬಳ್ಳಿ ವಕೀಲರ ಸಂಘ

ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತು ಹಾಕದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆದಿರುವುದಾಗಿ ಸಂಘದ ವಕ್ತಾರರು ಹೈಕೋರ್ಟ್​ಗೆ ಸ್ಪಷ್ಟಪಡಿಸಿದ್ದಾರೆ.

Kashmiri students    treason  case
ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ: ನಿರ್ಣಯ ಹಿಂಪಡೆದ ಹುಬ್ಬಳ್ಳಿ ವಕೀಲರ ಸಂಘ

By

Published : Feb 27, 2020, 4:40 PM IST

ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತು ಹಾಕದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆದಿರುವುದಾಗಿ ಸಂಘದ ವಕ್ತಾರರು ಹೈಕೋರ್ಟ್​ಗೆ ಸ್ಪಷ್ಟಪಡಿಸಿದ್ದಾರೆ.



ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಪ್ರಶ್ನಿಸಿ ಬಿ.ಟಿ.ವೆಂಕಟೇಶ್ ಸೇರಿದಂತೆ 24 ವಕೀಲರ ತಂಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಪೀಠಕ್ಕೆ ಮಾಹಿತಿ ನೀಡಿ, ಬಂಧಿತ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ಫೆ. 24ರಂದು ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆದಿದೆ. ಹೀಗಾಗಿ ವಕಾಲತ್ತು ಹಾಕುವ ವಕೀಲರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ವಕೀಲರ ಗಲಾಟೆ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿತು. ವಕಾಲತ್ತು ಹಾಕಲು ಮುಂದಾಗಿದ್ದ ವಕೀಲರ ವಿರುದ್ಧ ಗಲಾಟೆ ಮಾಡಿದ್ದೇಕೆ? ಕಾನೂನು ರಕ್ಷಿಸಬೇಕಾದ ವಕೀಲರೇ ಕಾನೂನು ಗೌರವಿಸದಿದ್ದರೆ ಹೇಗೆ? ಇಂತಹ ಘಟನೆಗಳಿಂದ ಸಾಂವಿಧಾನಿಕ ಸಂಸ್ಥೆಗಳ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ವಕೀಲರಿಂದ ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿದರೆ ಅಥವಾ ವಕಾಲತ್ತು ಹಾಕುವ ವಕೀಲರಿಗೆ ತೊಂದರೆ ನೀಡಿದರೆ ಯಾವುದೇ ರಿಯಾಯಿತಿ ನೀಡದೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಪ್ರಕರಣಕ್ಕೆ ಅಡ್ಡಿ ಉಂಟುಮಾಡಿದರೆ ಅಂತಹ ಪ್ರತಿಯೊಬ್ಬ ವಕೀಲನ ಹೆಸರು, ವಿಳಾಸವನ್ನು ಪೊಲೀಸರಿಂದ ಪಡೆದು ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಪೀಠ ಎಚ್ಚರಿಕೆ ನೀಡಿತು.

ಅಲ್ಲದೇ ಆರೋಪಿತ ವಿದ್ಯಾರ್ಥಿಗಳ ಪರ ವಕಾಲತ್ತು ಹಾಕುವ ವಕೀಲರಿಗೆ ಎಲ್ಲಾ ಅಗತ್ಯ ರಕ್ಷಣೆ ನೀಡುವಂತೆ ಹುಬ್ಬಳ್ಳಿ ಪೊಲೀಸ್ ಆಯುಕ್ತರಿಗೆ ಪೀಠ ನಿರ್ದೇಶಿಸಿತು. ಹಾಗೆಯೇ ಪ್ರಕರಣದ ವಿಚಾರಣೆ ನಡೆಸಲಿರುವ ಮ್ಯಾಜಿಸ್ಟ್ರೇಟ್​ಗೂ ನಿರ್ದೇಶನ ನೀಡಿ ಈ ಪ್ರಕರಣವನ್ನು ಎಲ್ಲಾ ಸಾಮಾನ್ಯ ಪ್ರಕರಣದಂತೆ ಪರಿಗಣಿಸಬೇಕು. ಅದರಂತೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಿ ಎಂದು ಸೂಚಿಸಿ ವಿಚಾರಣೆಯನ್ನು ಮಾ. 6ಕ್ಕೆ ಮುಂದೂಡಿತು. ಕೊನೆಯಲ್ಲಿ ಅಡ್ವೊಕೇಟ್ ಜನರಲ್ ಉದ್ದೇಶಿಸಿ, ಪ್ರಕರಣದ ವಿಚಾರಣೆ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ವಕೀಲರು ಸಹಕರಿಸಿದರೆ ಮುಂದಿನ ವಿಚಾರಣೆ ವೇಳೆ ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇತ್ಯರ್ಥಪಡಿಸುವ ಕುರಿತು ನಿರ್ಧರಿಸುವುದಾಗಿ ತಿಳಿಸಿತು. ಇನ್ನು ವಿಚಾರಣೆ ವೇಳೆ ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹಾಜರಿದ್ದರು.

ABOUT THE AUTHOR

...view details