ಬೆಂಗಳೂರು:ಕೇರಳದ ಕಾಸರಗೋಡು ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ಸಮಗ್ರ ಕನ್ನಡ ನಾಡು ರಚನೆಯಾಗಬೇಕಾದ ಅಗತ್ಯವಿದೆ ಎಂದು ಇತಿಹಾಸ ತಜ್ಞ ಡಾ. ಹೆಚ್.ಎಸ್. ಗೋಪಾಲರಾವ್ ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕಾಸರಗೋಡು ಮತ್ತು ಸೊಲ್ಲಾಪುರದಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏಕೀಕರಣದ ಸಂದರ್ಭದಲ್ಲಿ ಈ ಭಾಗಗಳು ಕರ್ನಾಟಕದಿಂದ ಹೊರ ಉಳಿಯುವಂತಾಗಿದ್ದು, ಮತ್ತೆ ಕರ್ನಾಟಕಕ್ಕೆ ಸೇರ್ಪಡೆಯಾಗೇಕು. ಕರ್ನಾಟಕ ಶ್ರೀ ವಿಜಯನ ಕಾಲದಲ್ಲಿದ್ದ ಭಾಗ ಸಿಗದಿದ್ದರೂ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿದ್ದಿಷ್ಟಾದರೂ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸಲಿದೆ ಎಂದರು.
ಕನ್ನಡ ನಾಡಿನಲ್ಲಿ ಬದುಕಿದ್ದು, ಇಲ್ಲಿಯೇ ಜೀವ ಬಿಡಬೇಕು ಎಂಬುದಾಗಿ ರಾಷ್ಟ್ರಕವಿ ಗೋವಿಂದ ಪೈ ಆಸೆಯನ್ನಿಟ್ಟುಕೊಂಡಿದ್ದರು. ಅದಕ್ಕಾಗಿ ಹೋರಾಡಿದ್ದರು. ಅಲ್ಲದೆ, ಕನ್ನಡ ಮತ್ತು ತುಳು ನನ್ನ ಇಬ್ಬರು ತಾಯಂದಿರು ಎಂಬುದಾಗಿ ಹಲವು ಸಂದರ್ಭದಲ್ಲಿ ಅವರು ಹೇಳಿದ್ದರು. ಆದರೆ ಕಾಸರಗೋಡನ್ನು ಏಕೀಕರಣದ ವೇಳೆ ಕರ್ನಾಟಕದಿಂದ ಕೈಬಿಟ್ಟ ವಿಷಯ ಕೇಳಿದಾಗ ಕೊನೆಗೂ ಅನಾಥನಾಗಿ ಹೋದೆ ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಭಾಗಗಳು ಮತ್ತೆ ಕರ್ನಾಟಕ್ಕೆ ಸೇರಬೇಕಾದ ಅಗತ್ಯವಿದೆ ಎಂದು ಹೇಳಿದರು.