ಬೆಂಗಳೂರು: ಕಸಾಪ ಸದಸ್ಯರಾಗಲು 10ನೇ ತರಗತಿ ತೇರ್ಗಡೆಯಾಗಿರಬೇಕು. ಇಲ್ಲದಿದ್ದರೆ ಪರಿಷತ್ತು ನಡೆಸುವ ಪರೀಕ್ಷೆಯನ್ನು ಎದುರಿಸಬೇಕು. ಹೊರನಾಡು, ಹೊರದೇಶದಲ್ಲಿರುವ ಕನ್ನಡಿಗರಿಗೆ ಈ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆ ಅನ್ವಯವಾಗದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಬೈಲಾದ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ನಿವೃತ್ತ ನ್ಯಾಯಮೂರ್ತಿ ನಾಗರಾಜ್ ನೇತೃತ್ವದಲ್ಲಿ ರಚಿಸಲಾದ ಸಮಿತಿ ಕರಡು ಸಿದ್ಧಪಡಿಸಿದೆ. ಸಮಿತಿಯಲ್ಲಿ ಪ್ರತಿನಿಧಿಗಳ ಸಂಖ್ಯೆ 81ಕ್ಕೆ ಹೆಚ್ಚಳ, ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಠೇವಣಿ ಮೊತ್ತ 50 ಸಾವಿರಕ್ಕೆ ಏರಿಕೆ ಸೇರಿದಂತೆ ಹಲವು ತಿದ್ದುಪಡಿಗಳನ್ನು ಶಿಫಾರಸು ಮಾಡಲಾಗಿದೆ. ಪರಿಷತ್ತಿನ ಸದಸ್ಯರಾಗಲು ಕನ್ನಡ ಓದು ಬರಹ ಬರಬೇಕೆಂಬುದು ಹಿಂದಿನಿಂದಲೂ ಇದೆ. ಈಗ ಹೊಸದಾಗಿ ಶೈಕ್ಷಣಿಕ ಅರ್ಹತೆ ಹಾಗೂ ಪರೀಕ್ಷೆಯನ್ನು ಸೇರ್ಪಡೆ ಮಾಡಲಾಗಿದೆ.
ಗಡಿ ರಾಜ್ಯ, ಹೊರ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಹೊರದೇಶದ ಕನ್ನಡಿಗರಿಗೆ ಸದಸ್ಯರಾಗಲು ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಪರಿಷತ್ತಿನ ಸದಸ್ಯರು, ಸದಸ್ಯ ಸಂಸ್ಥೆಗಳು ಅನುಚಿತ ನಡವಳಿಕೆ ಇತ್ಯಾದಿ ಆರೋಪಕ್ಕೆ ಒಳಗಾದರೆ, ಮೇಲ್ನೋಟಕ್ಕೆ ಸರಿ ಎನಿಸಿದರೆ ಕೇಂದ್ರ ಘಟಕದ ಅಧ್ಯಕ್ಷರು ಅಂತಹವರನ್ನು ನೇರವಾಗಿ ಅಮಾನತು ಮಾಡಬಹುದು. ಇದಕ್ಕೆ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಬೇಕಿಲ್ಲ ಎಂದು ಹೇಳಲಾಗಿದೆ. ತಾತ್ಕಾಲಿಕವಾಗಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕಾತಿ ಅಧಿಕಾರವನ್ನು ಕೇಂದ್ರ ಘಟಕದ ಅಧ್ಯಕ್ಷರಿಗೆ ನೀಡುವ ಬಗ್ಗೆ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.