ಬೆಂಗಳೂರು:ಕೊರಟಗೆರೆಕ್ಷೇತ್ರದಲ್ಲಿ ಕಾಂಗ್ರೆಸ್ನ ಜಿ.ಪರಮೇಶ್ವರ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಸೋಲನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿರ್ವಹಿಸಿದ್ದ ಅನಿಲ್ ಕುಮಾರ್ ಎಸ್ಸಿ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದ ಮತದಾರರು ಕೈ ಹಿಡಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದರು.
ಆದರೆ, ಹಿರಿಯ ರಾಜಕಾರಣಿಯಾದ ಪರಮೇಶ್ವರ್ ತಮ್ಮದೇ ಆದ ಹಿಡಿತವನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. 2010ರಿಂದ 18ರವರೆಗೆ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಇವರು, ಇದೇ ಕ್ಷೇತ್ರದಿಂದ 2008 ಮತ್ತು 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2013 ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಹೀಗಾಗಿ ಅವರಿಗೆ ಸಿಎಂ ಪಟ್ಟ ತಪ್ಪಿತು ಎಂಬ ಮಾತುಗಳಿವೆ. ಕಾಂಗ್ರೆಸ್ನಲ್ಲಿ ಸಹಜವಾಗಿ ಕೆಪಿಸಿಸಿ ಅಧ್ಯಕರಾಗಿದ್ದವರೇ ಸಿಎಂ ಪಟ್ಟಕ್ಕೆ ಹೆಚ್ಚು ಒಲವು ಎಂಬ ಜನಜನಿತ ಮಾತಿದೆ. ಆದರೆ ಪರಮೇಶ್ವರ್ ಸೋಲು ಅವರಿಗೆ ಆಘಾತವನ್ನು ತಂದಿಟ್ಟಿತ್ತು. ಇನ್ನು ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತರಾಗಿ ಸಹ ಹೆಸರು ಮಾಡಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಬೆಳಗಾವಿಯ ರಾಯಬಾಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಭಾಸ್ಕರ್ ರಾವ್ (ಚಾಮರಾಜಪೇಟೆ):ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಗೆಲುವು ಸಾಧಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಹಾಗು ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಪೊಲೀಸ್ ಆಯಕ್ತರಾಗಿದ್ದ ಇವರು ತಮ್ಮ ಸೇವಾವಧಿ ಇನ್ನೂ ಇರುವಾಗಲೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದರು. ಅಂದರೆ, ವಿಆರ್ಎಸ್ ಪಡೆದುಕೊಂಡಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಮೇಲೆ ಅವರು, ಮೊದಲಿಗೆ ಆಮ್ ಆದ್ಮಿ ಪಾರ್ಟಿ ಪಕ್ಷ ಸೇರಿದ್ದರು. ಆಪ್ ಉಪಾಧ್ಯಕ್ಷರಾಗಿದ್ದ ಇವರು ಚುನಾವಣೆ ಸಮೀಪದಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.
ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ ಹಾಗೂ ಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಗೆ ಕಮಲ ಪಾಳಯ ಭಾಸ್ಕರ್ ರಾವ್ ಅವರನ್ನು ಕಾಂಗ್ರೆಸ್ನ ಜಮೀರ್ ಅಹ್ಮದ್ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ ಸ್ಪರ್ಧೆಗೆ ಇಳಿಸಿದೆ. ಇದೇ ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್ ಮತ್ತು ಒಮ್ಮೆ ಕಾಂಗ್ರೆಸ್ನಿಂದ ಜಮೀರ್ ಅಹಮ್ಮದ್ ಖಾನ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈಗ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.