ಬೆಂಗಳೂರು : ಭಾರತದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಗಳ 6ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಅಂತರ್ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯದ 2 ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪುರಸ್ಕಾರ ಲಭಿಸಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ನಡೆದ ಈ ವಿವಿಧ ಸ್ತರದ ಸ್ಪರ್ಧೆಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿಯ ಡಿಜಿಟಲ್ ಗ್ರಂಥಾಲಯ ಯೋಜನೆಗೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ ದೊರಕಿದೆ.
ಕೋವಿಡ್ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ನೀಡುವ ವಿಶೇಷ ಪುರಸ್ಕಾರ ಬೆಂಗಳೂರು ಸ್ಮಾರ್ಟ್ ಸಿಟಿಗೆ ಲಭಿಸಿದೆ. ಹಾಗೆಯೇ, ಕಾಮಗಾರಿಗಳಲ್ಲಿ ಪದವೀಧರರಿಗೆ ಕೆಲಸ ನೀಡಿ ಇಂಟರ್ನ್ಶಿಪ್ ನೀಡುವ ಯೋಜನೆಗೆ ಬೆಂಗಳೂರು ಸ್ಮಾರ್ಟ್ ಸಿಟಿಯನ್ನು ರನ್ನರ್ ಅಪ್ ಎಂದು ಘೋಷಿಸಲಾಗಿದೆ.