ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘ ಶನಿವಾರ ಉದ್ಘಾಟನೆಗೊಂಡಿದೆ. ಹಲವಾರು ವರ್ಷಗಳ ಕನಸಾಗಿದ್ದ ಮಹಿಳಾ ಪತ್ರಕರ್ತರ ಧ್ವನಿಗೆ ವೇದಿಕೆಯಾಗುವ ಈ ಸಂಘಟನೆಯನ್ನು ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ಅರ್ಧದಷ್ಟು ಜನಸಂಖ್ಯೆ ಮಹಿಳೆಯರೇ ಇರುವಾಗ ಅವರ ಕುರಿತು ಮಾಧ್ಯಮಗಳು ಮಾತನಾಡದಿದ್ದರೆ ಹೇಗೆ?, ಕೇವಲ ಅತ್ಯಾಚಾರ, ಕೊಲೆಯಾದಾಗ ಮಾತ್ರ ಮಹಿಳೆಯರ ಸುದ್ದಿಗಳು ಪ್ರಕಟವಾಗುತ್ತವೆ. ಇದು ಬದಲಾಗಬೇಕು ಎಂದರು.
ಅಷ್ಟೇ ಅಲ್ಲದೇ, ಇಂಗ್ಲಿಷ್ ಭಾಷೆಯ ಪತ್ರಕರ್ತರು ಹಾಗೂ ಭಾರತೀಯ ಭಾಷೆಗಳ ಪತ್ರಕರ್ತರಿಗೆ ಸಿಗುವ ಗೌರವ, ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮಾಧ್ಯಮದಲ್ಲೂ ಮಹಿಳಾ ಪತ್ರಕರ್ತರಿಗೆ ಪುರುಷರಷ್ಟು ಸ್ಥಾನಮಾನ ಸಿಗುತ್ತಿಲ್ಲ. ಇವೆಲ್ಲವನ್ನು ತಿದ್ದಲು ಮಹಿಳೆಯರು ಒಟ್ಟಾಗಿರಲು ಸಂಘಟನೆ ಅಗತ್ಯ ಎಂದು ಕಲ್ಪನಾ ಶರ್ಮಾ ಪ್ರತಿಪಾದಿಸಿದರು.