ಬೆಂಗಳೂರು:ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಒಣ ಹವೆ ಮುಂದುವರಿಯಲಿದ್ದು, 5 ನೇ ದಿನ ಅಂದರೆ ಡಿಸೆಂಬರ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಹಗುರ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ 20 ರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಹವಾಮಾನ ವಿಜ್ಞಾನಿ ಪ್ರಸಾದ್, ಉತ್ತರ ಒಳನಾಡಿನ ಐದು ದಿನವೂ ಒಣಹವೆ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಒಣಹವೆ ಇರಲಿದ್ದು, ನಾಲ್ಕನೇ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಕೊಡಗಿನಲ್ಲಿ ಒಂದೆರಡು ದಿನ ಹಗುರ ಮಳೆಯಾಗಲಿದೆ. ಐದನೇ ದಿನ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹೊರತು ಪಡಿಸಿ ಉಳಿದೆಡೆ ಒಂದೆರಡು ಕಡೆ ಹಗುರ ಮಳೆಯಾಗಲಿದೆ ಎಂದರು.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 15.6 ಡಿಗ್ರಿ ಸೆಲ್ಸಿಯಸ್ ಇದ್ದು, ಇಂದು ಮತ್ತು ನಾಳೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾಗಶಃ ಮೋಡ ಇರಲಿದೆ. ಬೆಳಿಗ್ಗೆ ಮಂಜು ಇರಲಿದೆ. ನಾಳೆ ಗರಿಷ್ಠ 28, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದರು.