ಬೆಂಗಳೂರು :ಸಿಎಂ ಬೊಮ್ಮಾಯಿ ಸರ್ಕಾರ ಇಂದಿನಿಂದ ಮೊದಲ ಅಧಿವೇಶನ ಎದುರಿಸುತ್ತಿದೆ. ಇಂದಿನ ವಿಧಾನಸಭೆ ಕಲಾಪ ಅಗಲಿದ ಗಣ್ಯರ ಸಂತಾಪಕ್ಕಷ್ಟೇ ಸೀಮಿತವಾಯಿತು.
ಮಳೆಗಾಲ ಅಧಿವೇಶನದ ಅಖಾಡ ಸಜ್ಜಾಗಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಯಿತು. ಅಗಲಿದ 31 ಗಣ್ಯರಿಗೆ ಸದನ ಸಂತಾಪ ಸೂಚಿಸಿತು. ಸ್ಪೀಕರ್ ಕಾಗೇರಿ, ಸಿಎಂ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಈ ಮೂಲಕ ಮೊದಲ ದಿನದ ಕಲಾಪ ಯಾವುದೇ ಗದ್ದಲ, ಕೋಲಾಹಲವಿಲ್ಲದೆ ಸಮಾಪ್ತಿಯಾಗಿದೆ.
ಕೊನೆಯ ಸಾಲಿನಲ್ಲಿ ಯಡಿಯೂರಪ್ಪ ಮತ್ತಿತರರು :ಯಡಿಯೂರಪ್ಪ ಸೇರಿ ಮಾಜಿ ಸಿಎಂ ಹಾಗೂ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ಗೆ ಯಾವ ಸಾಲಿನಲ್ಲಿ ಆಸನ ನೀಡಲಾಗುತ್ತದೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು. ಅದರಂತೆ ಸದನದ ಕೊನೆ ಸಾಲಿನ ವಿಪ್ ಪಕ್ಕದ ಆಸನದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಆಸನ ಹಂಚಿಕೆ ಮಾಡಲಾಗಿದೆ. ಇತ್ತ ಮಾಜಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಅವರಿಗೆ ಕೊನೆ ಸಾಲಿನಲ್ಲೇ ಆಸನ ವ್ಯವಸ್ಥೆ ನೀಡಲಾಗಿದೆ.
ಯಡಿಯೂರಪ್ಪ ಅವರು ಕೊನೆ ಸಾಲಿನಲ್ಲಿ ತಮಗೆ ಆಸನ ನೀಡುವಂತೆ ಸ್ಪೀಕರ್ಗೆ ಮನವಿ ಮಾಡಿದ್ದರು. ಅದರಂತೆ ಸ್ಪೀಕರ್ ಮಾಜಿ ಸಿಎಂಗೆ ಕೊನೆ ಸಾಲಿನಲ್ಲಿ ಆಸನ ನೀಡಲಾಗಿದೆ.