ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆ ಖರೀದಿಸಿರುವ ವೈದ್ಯಕೀಯ ಪರಿಕರಗಳ ಕುರಿತು ಅರ್ಧ ಗಂಟೆ ಚರ್ಚೆ ನಡೆಸಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು.
ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕೊರೊನಾ ಹಿನ್ನೆಲೆ ಖರೀದಿಸಲಾದ ವಿವಿಧ ಸಾಮಗ್ರಿಗಳ ಬಗ್ಗೆ ಸದಸ್ಯ ಎಂ. ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ತಜ್ಞರ ಸಮಿತಿಯಲ್ಲಿ ಚರ್ಚಿಸಿಯೇ ಸರ್ಕಾರ ವೈದ್ಯಕೀಯ ಪರಿಕರಗಳನ್ನು ಖರೀದಿಸಿದೆ. ಕೋವಿಡ್ ಆರಂಭದಲ್ಲಿ ನಮ್ಮ ದೇಶದಲ್ಲಿ ಪರಿಕರಗಳ ಕೊರತೆ ಇತ್ತು. ಪೂರೈಕೆದಾರರೇ ಇಲ್ಲದ ಸಮಯದಲ್ಲಿ ನಾವು ಹೊರದೇಶಗಳಿಂದ ತರಿಸಿಕೊಳ್ಳಬೇಕಾಯಿತು. ಈ ವೇಳೆ ಬಂದ ಕಳಪೆ ಕಿಟ್ ವಾಪಸ್ ಕಳಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಖರೀದಿಸಿದ ಪರಿಕರಗಳ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ. ನೀಡ್ ಅಸೆಸ್ಮೆಂಟ್ ಸಮಿತಿ ಪರಿಶೀಲನೆ ನಡೆಸಲಿದೆ. ನಂತರ ತಾಂತ್ರಿಕ ವಿವರಣೆ ಸಮಿತಿ, ಖರೀದಿ ಸಮಿತಿ, ಬೆಲೆ ನಿಗದಿ ಸಮಿತಿ ಇದೆ. ಎಲ್ಲವನ್ನೂ ಪರಿಶೀಲನೆ ಮಾಡಿಯೇ ಖರೀದಿ ಮಾಡಲಾಗಿದೆ. ನಾವಾಗಿ ಯಾವುದೇ ಕಂಪನಿಯನ್ನು ಆಯ್ದುಕೊಂಡಿಲ್ಲ ಕೇಂದ್ರ ಕಳಿಸಿದ ಪಟ್ಟಿಯಲ್ಲಿನ ಕಂಪನಿಗಳಿಂದಲೇ ತರಿಸಿಕೊಳ್ಳಲಾಗಿದೆ ಎಂದು ಉತ್ತರಿಸಿದರು.
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಹಾಗೂ ಪಿ.ಆರ್. ರಮೇಶ್, ದುಬಾರಿ ಬೆಲೆ ನೀಡಿ ಪರಿಕರ ಖರೀದಿಸಲಾಗಿದೆ. ಪಿಎಂ ಕೇರ್ ನಿಂದ 4 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿ ಇಡೀ ದೇಶಕ್ಕೆ ವಿತರಣೆ ಮಾಡಲಾಗಿದೆ. ಆದರೆ, ನಮ್ಮ ರಾಜ್ಯ ಸರ್ಕಾರ 5 ರಿಂದ 18 ಲಕ್ಷದವರೆಗೆ ಬೆಲೆ ಕೊಟ್ಟು ಖರೀದಿಸಿದೆ. ಹಾಗಾದರೆ ಪಿಎಂ ಕೇರ್ಯಿಂದ ಖರೀದಿಸಿರುವ ವೆಂಟಿಲೇಟರ್ ಕಳಪೆನಾ ಎಂದು ಪ್ರಶ್ನಿಸಿದರು. ಕಳಪೆ ಎಂದು ವಾರಿಯರ್ಸ್ ಪಿಪಿಇ ಬೀದಿಗೆಸೆದು ಪ್ರತಿಭಟನೆ ಮಾಡಿದ್ದಾರೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಪ್ರಶ್ನೋತ್ತರದಲ್ಲಿ ಚರ್ಚೆಗೆ ಅವಕಾಶವಿಲ್ಲ, ಚರ್ಚೆಗೆ ಬಂದರೆ ನಾವೂ ಸಿದ್ಧರಿದ್ದೇವೆ, ವ್ಯಾಪಕ ಚರ್ಚೆ ಮಾಡೋಣ ಎಂದರು. ಇದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ದನಿಗೂಡಿಸಿದರು. ಬೇರೆ ರೂಪದಲ್ಲಿ ಚರ್ಚೆಗೆ ತನ್ನಿ ಎಂದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಧ್ಯಪ್ರವೇಶಿಸಿ, ಚರ್ಚೆಗೆ ನಾವೂ ಸಿದ್ಧರಿದ್ದೇವೆ, ಅವಕಾಶ ನೀಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ನಂತರ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಲಾಗುತ್ತದೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ರೂಲಿಂಗ್ ನೀಡಿದರು.
ನಂತರ ಸದಸ್ಯ ಮರಿತಿಬ್ಬೇಗೌಡ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರಾತಿ ಬಗ್ಗೆ ಪ್ರಶ್ನಿಸಿದರು. ಸರ್ಕಾರ ಜಾಣ ಕಿವುಡುತನ ಪ್ರದರ್ಶಿಸಿದೆ, ನನ್ನ ಪ್ರಶ್ನೆ ಅರ್ಥ ಮಾಡಿಕೊಂಡು ಜಾಣ ಉತ್ತರ ಕೊಟ್ಟಿದ್ದಾರೆ. ಮುಖ್ಯ ಶಿಕ್ಷಕರಿಗೆ ವಿಶೇಷ ಭತ್ಯೆ ಬಲ ಕೊಟ್ಟಿಲ್ಲ. ಅವರಿಗೆ ಸಹ ಶಿಕ್ಷಕರಿಗಿಂತ ವೇತನ ಕಡಿಮೆ ಇದೆ. ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ನಮ್ಮ ಸರ್ಕಾರಕ್ಕೆ ಜಾಣ ಕಿವುಡು ಇಲ್ಲ, ಕುರುಡೂ ಇರಬಾರದು. ಸವಿಸ್ತಾರವಾಗಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಲಾಗಿದೆ. ಈ ಸಂಬಂಧ ಅವರಿಗೆ ಅನುಮಾನ ಇದ್ದಲ್ಲಿ ಸದಸ್ಯರೊಂದಿಗೆ ಚರ್ಚಿಸಿ, ಏನು ಮಾಡಬಹುದು ಎಂದು ನಿರ್ಧರಿಸಲಾಗುತ್ತದೆ ಎಂದರು.
ನಂತರ ಎನ್ಎಬಿಹೆಚ್ ಸಂಸ್ಥೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಮಾನ್ಯತೆ ಕಲ್ಪಿಸುವ ಕುರಿತು ಪಿ.ಆರ್. ರಮೇಶ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಈ ಸಂಬಂಧ ತಜ್ಞರ ಸಮಿತಿ ರಚಿಸಿ ಆಸ್ಪತ್ರೆ ಸುಧಾರಣೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಾಗುತ್ತದೆ. ಎನ್ಎಬಿಹೆಚ್ ಗುಣಮಟ್ಟಕ್ಕೆ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಕೇಂದ್ರದ ಅನುದಾನ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ಬಳಿಕ ಶೂನ್ಯ ವೇಳೆಯನ್ನು ಕೈಗೆತ್ತಿಕೊಳ್ಳಲಾಯಿತು. ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಡ್ರಗ್ಸ್ ಮತ್ತು ಗಾಂಜಾ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು ಸಿಲುಕುತ್ತಿದ್ದಾರೆ. ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಯಾವ ಭಯವಿಲ್ಲದೇ ಶಾಲಾ ಆವರಣದಲ್ಲೇ ಡ್ರಗ್ಸ್ ಗಾಂಜಾ ಸೇವನೆ ಮಾಡಿದ್ದಾರೆ. ಇದು ಭಯೋತ್ಪಾದನೆಗಿಂತ ಕೆಟ್ಟ ಪ್ರಭಾವ ಬೀರಲಿದೆ. ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಶ್ರೀಮಂತರ ಮಕ್ಕಳು ಡ್ರಗ್ಸ್, ಬಡವರ ಮಕ್ಕಳು ಗಾಂಜಾ ಜಾಲದಲ್ಲಿ ಸಿಲುಕಿದ್ದಾರೆ. ಸಣ್ಣ ಮಕ್ಕಳ ಕೈಗೆ ಇದು ಹೇಗೆ ಸಿಗುತ್ತಿದೆ, ಅವರ ಮುಂದಿನ ಭವಿಷ್ಯವೇನು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಡ್ರಗ್ಸ್ ಮೇಲೆ ಗಮನ ಸೆಳೆಯುವ ಸೂಚನೆ ಇದೆ. ಅದರ ನಡುವೆ ಶೂನ್ಯ ವೇಳೆಯಲ್ಲಿಯೂ ಕೇಳಲಾಗಿದೆ. ಇದನ್ನು ಒಟ್ಟಿಗೆ ತರಬಹುದಿತ್ತು. ಪರಿಷತ್ ಕಾರ್ಯಾಲಯ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು. ಈ ಆರೋಪವನ್ನು ನಯವಾಗಿ ತಳ್ಳಿಹಾಕಿದ ಸಭಾಪತಿಗಳು, ಎರಡೂ ಬೇರೆ ಬೇರೆ. ಇದು ಹೊರಟ್ಟಿ ಅವರದ್ದು ಸೀಮಿತವಾದ ಪ್ರಶ್ನೆ ಎಂದರು.
ನಂತರ ಸರ್ಕಾರದ ಪರವಾಗಿ ಮಾತನಾಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎರಡು ದಿನದಲ್ಲಿ ಉತ್ತರವನ್ನು ಸದನಕ್ಕೆ ಮಂಡಿಸಲಿದ್ದೇವೆ. ಆದರೆ ಡ್ರಗ್ಸ್ ಮತ್ತು ಗಾಂಜಾ ವಿಚಾರದಲ್ಲಿ ಸರ್ಕಾರ ನಿರ್ಧಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಿದೆ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು. ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಲಾಯಿತು.