ಕರ್ನಾಟಕ

karnataka

By

Published : Jun 16, 2023, 4:36 PM IST

Updated : Jun 16, 2023, 9:58 PM IST

ETV Bharat / state

ಬೆಂಗಳೂರಿನ ರಾಜರಾಜೇಶ್ವರಿ ನಗರ ವಲಯದಲ್ಲಿ 118 ಕೋಟಿ ರೂ. ಅಕ್ರಮ: ಬಿಬಿಎಂಪಿಯ 11 ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್

ರಾಜರಾಜೇಶ್ವರಿ ನಗರ ವಲಯದಲ್ಲಿ 118 ಕೋಟಿ ರೂ. ಸರ್ಕಾರಿ ಹಣ ನಷ್ಟಕ್ಕೆ ಕಾರಣರಾದ 11 ಪಾಲಿಕೆ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.

11 corporation officials suspended
11 corporation officials suspended

ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿದ ಆರೋಪದ ಮೇಲೆ ಪಾಲಿಕೆಯ 11 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಈ ಬಗ್ಗೆ ವಿಚಾರಣಾ ಅಧಿಕಾರಿಯನ್ನಾಗಿ ಪ್ರಾದೇಶಿಕ ಆಯುಕ್ತರಾದ ಅಮಾನ್ ಆದಿತ್ಯ ಬಿಸ್ವಾಸ್​ರನ್ನು ನೇಮಿಸಲಾಗಿದೆ.

ಎಇಇ ಜಿ.ಎಂ. ಚಂದ್ರನಾಥ (ನಿವೃತ್ತ), ಟಿವಿಸಿಸಿ ಕೋಶ ಸಹಾಯಕ ಅಭಿಯಂತರ ಸತೀಶ್ ಕುಮಾರ್, ಆರ್​ಆರ್ ನಗರ ವಿಭಾಗದ ಕಾರ್ಯಪಾಲಕ ಎಂಜನಿಯರ್ ಬಸವರಾಜ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ಸಿದ್ದರಾಮಯ್ಯ, ಸಹಾಯಕ ಅಭಿಯಂತರ ಎಸ್.ಜಿ. ಉಮೇಶ್, ಟಿವಿಸಿಸಿ ವಿಭಾಗದ ಮುಖ್ಯ ಇಂಜಿನಿಯರ್ ದೊಡ್ಡಯ್ಯ, ರಾಜರಾಜೇಶ್ವರಿ ನಗರ ವಲಯದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ವಲಯದ ಸಹಾಯಕ ಇಂಜಿನಿಯರ್ ಶಿಲ್ಪಾ, ರಾಜರಾಜೇಶ್ವರಿ ನಗರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭಾರತಿ, ಲಗ್ಗೆರೆ ವಲಯದ ಡೆಪ್ಯುಟಿ ಮ್ಯಾನೇಜರ್ ಅನಿತಾ ಹಾಗೂ ಗೂಳಿಗೌಡ ಅಮಾನತ್ತಾದ ಅಧಿಕಾರಿಗಳಾಗಿದ್ದಾರೆ.

ಲೋಕಾಯುಕ್ತ ವರದಿಯ ಅನ್ವಯ 118 ಕೋಟಿಗೂ ಹೆಚ್ಚು ನಷ್ಟವಾಗಿರುವುದು ಲೋಕಾಯುಕ್ತರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಕೇವಲ 114 ಕಾಮಗಾರಿಗಳ ಪರಿಶೀಲನೆಯಿಂದ ಬೃಹತ್ ಮೊತ್ತದ ದುರುಪಯೋಗ ಬೆಳಕಿಗೆ ಬಂದಿದೆ. ಇನ್ನೂ ಹೆಚ್ಚಿನ ಕಾಮಗಾರಿಗಳ ಪರಿಶೀಲನೆಯಿಂದ ಬೃಹತ್ ಮೊತ್ತದ ಹಣ ದುರುಪಯೋಗ ಪತ್ತೆಯಾಗುವ ಸಾಧ್ಯತೆ ಇದೆ ಎಂದು ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಗರಣದ ಸಂಬಂಧ ಲೋಕಾಯುಕ್ತ ತಮ್ಮ ವರದಿಯಲ್ಲಿ ತಿಳಿಸಿದ ದಿನಾಂಕದಿಂದ, ಹಿಂದಿನ ಎರಡೂವರೆ ವರ್ಷಗಳಲ್ಲಿ ಬಿಬಿಎಂಪಿಯಿಂದ ನಿರ್ವಹಿಸಲಾಗಿರುವ ಕಾಮಗಾರಿ ಮತ್ತು ಅನುಷ್ಠಾನಗೊಳಿಸುತ್ತಿರುವ ಯೋಜನೆ ಬಗ್ಗೆ ತನಿಖೆ ಮಾಡಿ ಸಮಗ್ರ ವರದಿ ಸಲ್ಲಿಸಲು ವಿಚಾರಣಾಧಿಕಾರಿ ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಕೆ ಸುರೇಶ್ ದೂರು:ಸಂಸದ ಡಿಕೆ ಸುರೇಶ್ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತಕ್ಕೆ 118 ಕೋಟಿ ರೂಪಾಯಿ ಸರ್ಕಾರಿ ಹಣವು ವಿವಿಧ ಕಾಮಗಾರಿ ಹೆಸರಿನಲ್ಲಿ ನಷ್ಟವಾಗಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:Officer suspend: ಡೀಮ್ಡ್ ಅರಣ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ ಡಿಸಿಎಫ್​ ಕೆ. ಹರೀಶ್​ ಅಮಾನತು

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು:ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಬಳಿಯ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಕೆ. ಹರೀಶ್ ಅವರನ್ನು ಇತ್ತೀಚೆಗೆ ಸೇವೆಯಿಂದ ಅಮಾನತು ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು.

ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಸಮೀಪದ ದಡಿಘಟ್ಟ ಗ್ರಾಮದ ಸರ್ವೆ ನಂಬರ್ 24 ರಲ್ಲಿನ ಅರಣ್ಯ ಪ್ರದೇಶದ ಒಟ್ಟು 21 ಎಕರೆ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಉಪ ಸಂರಕ್ಷಣಾಧಿಕಾರಿ ಹರೀಶ್ ಅವರು ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅರಣ್ಯ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ನೀಡಿತ್ತು.

ಈ ಪ್ರಕರಣದ ಬಗ್ಗೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಹಾಸನದ ಉಪ ಸಂರಕ್ಷಣಾಧಿಕಾರಿ ಹರೀಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ಅರಣ್ಯ ಪಡೆಯ ಮುಖ್ಯಸ್ಥ ರಾಜೀವ್ ರಂಜನ್ ಅವರು ಮೇ ತಿಂಗಳ ಅಂತ್ಯದಲ್ಲಿ ಅರಣ್ಯಾಧಿಕಾರಿ ಹರೀಶ್ ಅವರ ಪಾತ್ರ ಕುರಿತು ವರದಿ ಸಲ್ಲಿಸಿದ್ದರು.

ಇದನ್ನೂ ಓದಿ:ತುಮಕೂರು ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಲಂಚ: ಎಎಸ್‌ಐ, ಜೀಪ್‌ ಚಾಲಕ ಸಸ್ಪೆಂಡ್‌- ವಿಡಿಯೋ ವೈರಲ್

Last Updated : Jun 16, 2023, 9:58 PM IST

ABOUT THE AUTHOR

...view details