ಕರ್ನಾಟಕ

karnataka

ETV Bharat / state

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ವಿಶ್ವವಿದ್ಯಾಲಯ ಉಳಿಸಿ: ಸದನದಲ್ಲಿ ಕೇಳಿ ಬಂತು ಒತ್ತಾಯ - ಮಾಜಿ ಸಿಎಂ ಜಗದೀಶ್ ಶೆಟ್ಟರ್

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿರುವ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಕೂಡಲೇ ದೊರೆಯುವಂತೆ ನೋಡಿಕೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

karnataka-university-financial-distress-issues-raised-in-assembly
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ವಿಶ್ವವಿದ್ಯಾಲಯ ಉಳಿಸಿ: ಸದನದಲ್ಲಿ ಕೇಳಿ ಬಂತು ಒತ್ತಾಯ

By

Published : Sep 22, 2022, 8:50 PM IST

Updated : Sep 22, 2022, 9:41 PM IST

ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಈ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಉಳಿಸಬೇಕೆಂದು ಕಾಂಗ್ರೆಸ್​ ಶಾಸಕ ಪ್ರಸಾದ್ ಅಬ್ಬಯ್ಯ ವಿಧಾನಸಭೆಯಲ್ಲಿ ಇಂದು ಒತ್ತಾಯಿಸಿದರು. ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಿರುವುದಕ್ಕೆ ಕಾರಣವೇ ಆರ್ಥಿಕ ಸಂಕಷ್ಟ ಎಂದು ಪ್ರತಿಪಾದಿಸಿದರು.

ಸಿದ್ದಪ್ಪ ಕಂಬಳಿ ಹಾಗೂ ಇನ್ನಿತರ ವಿದ್ವಾಂಸರ ಒತ್ತಾಸೆಯಿಂದ ಮುಂಬೈ ಸರ್ಕಾರದಲ್ಲಿ ಸ್ಥಾಪನೆಯಾಗಿರುವ ಅತ್ಯಂತ ಪ್ರಮುಖ ವಿಶ್ವವಿದ್ಯಾಲಯವಿದು. ಒಂದು ಕಾಲಕ್ಕೆ ಇಲ್ಲಿನ ಶಿಕ್ಷಣ ಅತ್ಯತ್ಕೃಷ್ಟವಾಗಿತ್ತು. ಈಗ ನಿತ್ಯ ಬೆಳಗಾದರೆ ಪ್ರತಿಭಟನೆಗಳನ್ನು ವಿಶ್ವವಿದ್ಯಾಲಯ ನೋಡುವಂತಾಗಿದೆ. ಇದಕ್ಕೆ ಕಾರಣ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟ ಎಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಲೂ ಸಾಧ್ಯವಾಗುತ್ತಿಲ್ಲ. ಹಣವಿಲ್ಲದೇ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ವಿಶ್ವವಿದ್ಯಾಲಯ ಉಳಿಸುವುದಕ್ಕೆ ಅಗತ್ಯವಾಗುವಂತೆ ಹಣಕಾಸಿನ ನೆರವು ನೀಡಬೇಕೆಂದು ಒತ್ತಾಯಿಸಿದರು.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ವಿಶ್ವವಿದ್ಯಾಲಯ ಉಳಿಸಿ: ಸದನದಲ್ಲಿ ಕೇಳಿ ಬಂತು ಒತ್ತಾಯ

ಅಬ್ಬಯ್ಯ ಅವರ ಮಾತಿಗೆ ಧ್ವನಿಗೂಡಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಶ್ವವಿದ್ಯಾಲಯಕ್ಕೆ ಅಗತ್ಯ ಇರುವ 122 ಕೋಟಿ ರೂ.ಗಳನ್ನು ಒದಗಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಲಹೆ ಮಾಡಿದರು. ಈ ವೇಳೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿರುವ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಕೂಡಲೇ ದೊರೆಯುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಶೂನ್ಯವೇಳೆಯಲ್ಲಿ ಸುದೀರ್ಘ ಚರ್ಚೆಗಾಗಲೀ ಅಥವಾ ಉಪಪ್ರಶ್ನೆ, ವಿವರಣೆಗಳನ್ನು ಕೇಳುವುದಕ್ಕಾಗಲೀ ಅವಕಾಶ ಇಲ್ಲ ಎಂದರು. ಇದರಿಂದ ಕೆರಳಿದ ಪ್ರಸಾದ ಅಬ್ಬಯ್ಯ, ತಾನು ಪ್ರಸ್ತಾಪಿಸುತ್ತಿರುವುದು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಸಮಸ್ಯೆ. ಇಂತಹ ಮಹತ್ವದ ವಿಷಯವನ್ನು ಪ್ರಸ್ತಾಪಿಸುವಾಗಲೂ ಪೂರ್ಣ ಪ್ರಮಾಣದಲ್ಲಿ ಅವಕಾಶ ದೊರೆಯದೇ ಇದ್ದರೆ ಹೇಗೆ ಎಂದು ಸಚಿವರನ್ನು ಪ್ರಶ್ನಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಶಾಸಕ ಅಬ್ಬಯ್ಯ ಅವರನ್ನು ಸಮಾಧಾನಪಡಿಸಿದರು.

ಇದನ್ನೂ ಓದಿ:ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ: ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ

Last Updated : Sep 22, 2022, 9:41 PM IST

ABOUT THE AUTHOR

...view details