ಬೆಂಗಳೂರು:ಮೊನ್ನೆಯಷ್ಟೇ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಎದುರಿಸಿದ್ದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂದು ಪ್ರತಿಭಟನೆ ಹಮ್ಮಿಕೊಂಡ ದಿನ ಮಧ್ಯಾಹ್ನದ ವೇಳೆಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ ವೇತನ ಹೆಚ್ಚಳ ಮಾಡಿ ನೌಕರರನ್ನು ಸಮಾಧಾನಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿತ್ತು. ಇದೀಗರಸ್ತೆ ಸಾರಿಗೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿಯಲು ಮುಂದಾಗಿದ್ದಾರೆ. ಶನಿವಾರ ಸಂಜೆಯೊಳಗೆ ಆರನೇ ಪರಿಷ್ಕೃತ ವೇತನ ಜಾರಿಗೊಳಿಸದೇ ಇದ್ದರೆ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಆರನೇ ವೇತನ ಆಯೋಗದ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆ ಈಡೇರಿಸಲು ನೌಕರರ ಒಕ್ಕೂಟ ಶನಿವಾರ ಸಂಜೆ ತನಕ ಸರ್ಕಾರಕ್ಕೆ ಗಡುವು ನೀಡಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಸಾರಿಗೆ ಮುಷ್ಕರ ಆರಂಭಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾ ನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ನೌಕರರು ಹೇಳಿದ್ದಾರೆ.