ಬೆಂಗಳೂರು:ನಗರದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಅಲ್ಲಲ್ಲಿ ಸಾಧಾರಣವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಗಳೂರಲ್ಲಿ ದಿನವಿಡೀ ಬಿಡದ ವರುಣ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ! - ಉತ್ತರ ಒಳನಾಡಿನಲ್ಲಿ ಜ.6 ರಿಂದ 10 ರವರೆಗೆ ಮಳೆ ಸಾಧ್ಯತೆ
ಪೂರ್ವದ ಅಲೆಗಳ ಕಾರಣದಿಂದ ಕರಾವಳಿ ಜಿಲ್ಲೆಗಳಲ್ಲಿ ಜ. 6ರಿಂದ 10ರವರೆಗೆ ಮಳೆಯಾಗಲಿದೆ. ಹಾಗೂ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇನ್ನೂ 4 ದಿನ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ಯಲಹಂಕ, ಹೆಬ್ಬಾಳ, ಕಾರ್ಪೊರೇಷನ್, ಕೆ.ಆರ್. ಮಾರುಕಟ್ಟೆ, ವಿಜಯನಗರ, ಕೋರಮಂಗಲದಾದ್ಯಂತ ಮಳೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆಯ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಯ ಹಲವೆಡೆ ಇಂದು ಮಳೆಯಾಗಿದೆ. ಪೂರ್ವದ ಅಲೆಗಳ ಕಾರಣದಿಂದ ಕರಾವಳಿ ಜಿಲ್ಲೆಗಳಲ್ಲಿ ಜ. 6ರಿಂದ 10ರವರೆಗೆ ಮಳೆಯಾಗಲಿದೆ. ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದ್ರು.
ಉತ್ತರ ಒಳನಾಡಿನಲ್ಲಿ ಜ. 6ರಿಂದ 10ರವರೆಗೆ ಅಲ್ಲಲ್ಲಿ ಮಳೆಯಾಗಲಿದೆ. ದ.ಒಳನಾಡಿನಲ್ಲಿ ಜ. 6 ಹಾಗೂ 7ರಂದು ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಜ. 8ರಿಂದ 10ರವರೆಗೆ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 18-20 ಡಿಗ್ರಿ ಸೆಂಟಿಗ್ರೇಡ್ ಹಾಗೂ ಗರಿಷ್ಠ ಉಷ್ಣಾಂಶ 24ರಿಂದ 26 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.