ಬೆಂಗಳೂರು :ಜನರು ಮುಂದಿನ ದಿನಗಳಲ್ಲಿ ಮಳೆಯಾಗುವುದಿಲ್ಲ ಎಂದು ಮೈಮರೆಯುವಂತಿಲ್ಲ. ಏಕೆಂದರೆ, ನವೆಂಬರ್ 26ಕ್ಕೆ ಮತ್ತೆ ಬಂಗಾಳ ಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತ ಉಂಟಾಗಲಿದೆ. ಮುಂದಿನ ವಾರ ರಾಜ್ಯಾದ್ಯಂತ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ವಾರಗಳ ಕಾಲ ಅಕಾಲಿಕ ಮಳೆ ಸುರಿದು ಸಾಕಷ್ಟು ಅವಾಂತರಗಳಾಗಿವೆ. ಈ ಮಧ್ಯೆ ಒಂದೆರಡು ದಿನ ಮಳೆರಾಯ ಸ್ವಲ್ಪ ಬಿಡುವು ಕೊಟ್ಟಿದ್ದ. ಆದರೆ, ಇದೀಗ ಮತ್ತೆ ಮಳೆ ಆರಂಭವಾಗ್ತಿದೆ.
ಇನ್ನೂ ತಪ್ಪದ ಸಂಕಷ್ಟ :ಕಳೆದ ಭಾನುವಾರ ರಾತ್ರಿ ಬಿದ್ದ ಭಾರಿ ಮಳೆಗೆ ಬೆಂಗಳೂರು ಉತ್ತರ ಭಾಗ ತತ್ತರಿಸಿ ಹೋಗಿದೆ. ಇನ್ನೂ ಕೂಡ ಅದರ ಸಂಕಷ್ಟವನ್ನು ಎದುರಿಸುವಂತಾಗಿದೆ. ಮತ್ತೆ ಇಂದು ಸಂಜೆ ಮಳೆ ಸುರಿದಿದ್ದು ಜನತೆ ಹೈರಾಣಾಗಿದ್ದಾರೆ.
ದಾಖಲೆ ಬರೆದ ಮಳೆ :ನವೆಂಬರ್ 1ರಿಂದ ಈತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.270ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.330ರಷ್ಟು ಹೆಚ್ಚು ಮಳೆಯಾಗಿದೆ. ಈ ತಿಂಗಳಲ್ಲಿ ಇಷ್ಟೊಂದು ಮಳೆಯಾಗಿರುವುದು ಹೊಸ ದಾಖಲೆಯನ್ನೇ ಬರೆದಿದೆ.