ಬೆಂಗಳೂರು:ಏರ್ ಪೋರ್ಟ್ ಪ್ರಯಾಣಿಕರ ಮತ್ತು ಏರ್ಪೋರ್ಟ್ ಸಿಬ್ಬಂದಿಗಳ ಬಹು ದಿನದ ಕನಸು ನನಸಾಗಿದೆ.ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಚಾರ ಆರಂಭವಾಗಿದ್ದು,ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದಿನಿಂದ ರೈಲು ಸೇವೆ ಲಭ್ಯವಾಗಲಿದೆ.
ರೈಲ್ವೇ ನಿಲ್ದಾಣದಿಂದ ಈಗಾಗಲೇ ಮೊದಲ ಟ್ರಿಪ್ 4.45ಕ್ಕೆ ತೆರಳಿದ್ದು, 6 ಗಂಟೆಗೆ ಏರ್ಪೋರ್ಟ್ ತಲುಪಿದೆ.
ಒಟ್ಟು 5 ರೈಲುಗಳಿದ್ದು, ದಿನಕ್ಕೆ 10 ಟ್ರಿಪ್ ಇರಲಿದೆ. ಭಾನುವಾರ ಹೊರತುಪಡಿಸಿ ವಾರದ ಉಳಿದ ಎಲ್ಲ ದಿನ ಈ ರೈಲುಗಳ ಸಂಚರಿಸಲಿವೆ. ಸಾಮಾನ್ಯ ರೈಲು ದರ 10 ರೂ. ಆಗಿದ್ದು, ಎಕ್ಸ್‌ಪ್ರೆಸ್ ರೈಲು ದರ 30 ರೂ. ಇರಲಿದೆ.
ಸಂಸದ ಪಿಸಿ ಮೋಹನ್ ರೈಲಿನಲ್ಲಿ ಪ್ರಯಾಣಿಸಿ ಸೇವೆಗೆ ಚಾಲನೆ ನೀಡಿದರು. ಅಧಿಕಾರಿಗಳು ಮತ್ತು ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು. ಸಂಸದ ಪಿ.ಸಿ.ಮೋಹನ್ ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳು ಸಹ ಬೆಂಗಳೂರಿನಿಂದ ಏರ್ಪೋರ್ಟ್ ಹಾಲ್ಟ್ ಸ್ಟೇಷನ್ಗೆ ಆಗಮಿಸಿ, ರೈಲ್ವೆ ಸ್ಟೇಷನ್ನಿಂದ ಏರ್ಪೋರ್ಟ್ಗೆ ಸಂಪರ್ಕಿಸುವ ಏರ್ಪೋರ್ಟ್ ಶಟಲ್ ಬಸ್ನಲ್ಲಿ ಏರ್ಪೋರ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಏರ್ಪೋರ್ಟ್ಗೆ ರೈಲು ಸೇವೆ ನೀಡಬೇಕೆನ್ನುವುದು ಪ್ರಯಾಣಿಕರು ಮತ್ತು ಏರ್ಪೋರ್ಟ್ ಸಿಬ್ಬಂದಿಗಳ ಬಹುದಿನದ ಕನಸಾಗಿತ್ತು, ಅವರ ಕನಸು ಇಂದು ನನಸಾಗಿದೆ, ಏರ್ಪೋರ್ಟ್ನಲ್ಲಿ 28 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ರೈಲು ಸೇವೆ ಅವರಿಗೆ ಅನುಕೂಲವಾಗಲಿದೆ.
ಕೆಎಸ್ಆರ್ ನಿಂದ 15 ರೂಪಾಯಿ ಟಿಕೆಟ್ ದರ ಇದ್ದು, ಯಲಹಂಕದಿಂದ 10 ರೂಪಾಯಿ ಟಿಕೆಟ್ ದರ ಇದೆ. ಇವತ್ತಿನ ಟ್ರಾಫಿಕ್ ನಲ್ಲಿ ಕಾರಿನ ಮೂಲಕ ಬೆಂಗಳೂರಿನಿಂದ ಏರ್ಪೋರ್ಟ್ ತಲುಪಲು ಒಂದು ಗಂಟೆಯಲ್ಲಿ ಸಾಧ್ಯವೇ ಇಲ್ಲ, ಆದರೆ ರೈಲಿನಲ್ಲಿ ಒಂದು ಗಂಟೆಯಲ್ಲಿ ಏರ್ಪೋರ್ಟ್ ತಲುಪುವ ಗ್ಯಾರಂಟಿ ಇದೆ. ಇದರಿಂದ ಸಮಯದ ಉಳಿತಾಯವಾಗಲಿದೆ ಮತ್ತು ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಗಲಿದೆ. ದೇವನಹಳ್ಳಿ ಭಾಗದ ಜನರಿಗೂ ರೈಲು ಸೇವೆ ಅನುಕೂಲವಾಗಲಿದೆ ಎಂದರು.
ಮೆಜೆಸ್ಟಿಕ್, ಯಶವಂತಪುರ, ಯಲಹಂಕದಿಂದ ಏರ್ಪೋರ್ಟ್ಗೆ ರೈಲು ಸಿಗಲಿದೆ. ಇಲ್ಲಿಂದ ಕೇವಲ 10 ರೂಪಾಯಿಗೆ ಕೆ.ಆರ್.ಪುರ, ಮೆಜೆಸ್ಟಿಕ್, ಯಶವಂತಪುರ, ವೈಟ್ ಫೀಲ್ಡ್, ಬಯ್ಯಪ್ಪನಹಳ್ಳಿ, ಚಿಕ್ಕಬಳ್ಳಾಪುರ ತಲುಪಬಹುದು. ಎಕ್ಸ್‌ಪ್ರೆಸ್ ರೈಲಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಕೋಲಾರಕ್ಕೆ 30ರೂ, ಬಂಗಾರಪೇಟೆಗೆ 25ರೂ, ಶ್ರೀನಿವಾಸಪುರ 25ರೂ, ಚಿಂತಾಮಣಿಗೆ 20 ರೂ. ದರ ನಿಗದಿ ಮಾಡಲಾಗಿದೆ. ಏರ್ಪೋರ್ಟ್ ಹಾಲ್ಟ್ ಸ್ಟೇಷನ್ನಿಂದ ಏರ್ಪೋರ್ಟ್ಗೆ ಮೂರು ಕಿ.ಮೀ ಅಂತರವಿದ್ದು, ರೈಲ್ವೇ ನಿಲ್ದಾಣದಿಂದ ಏರ್ಪೋರ್ಟ್ಗೆ ಸದ್ಯ ಶಟಲ್ ಬಸ್ ಸೇವೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ಸೇವೆ ಆರಂಭವಾಗಲಿದೆ.
ಏರ್ಪೋರ್ಟ್ ಹಾಲ್ಟ್ ಸ್ಟೇಷನ್ ವೇಳಾಪಟ್ಟಿ:
ಬರುವ ರೈಲುಗಳು:
ಬೆಳಗ್ಗೆ
5:50 ಮೆಜೆಸ್ಟಿಕ್ - ದೇವನಹಳ್ಳಿ
7:20 ಯಲಹಂಕ- ದೇವನಹಳ್ಳಿ