ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ದಿನಗಣನೆ ಆರಂಭಗೊಂಡಿದೆ. ಜೂನ್ 4ರಿಂದ ಹರಿಯಾಣದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕರ್ನಾಟಕ 194 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿದೆ. ತನ್ನ ಈಜುಪಟುಗಳು ಮತ್ತು ಕುಸ್ತಿಪಟುಗಳ ಮೇಲೆ ಹೆಚ್ಚಿನ ವಿಶ್ವಾಸವಿರಿಸಿರುವ ಕರ್ನಾಟಕ, ಈ ಬಾರಿ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ. ಜೂನ್ 13ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಹರಿಯಾಣದ ಪಂಚಕುಲ ಆತಿಥ್ಯ ವಹಿಸಲಿದೆ. ಅಂಬಾಲ, ಶಾಹ್‌ಬಾದ್, ದೆಹಲಿ ಹಾಗೂ ಚಂಡೀಗಢದಲ್ಲೂ ಕೆಲ ಸ್ಪರ್ಧೆಗಳು ನಡೆಯಲಿವೆ.
ಕರ್ನಾಟಕದ ತಂಡದಲ್ಲಿ 84 ಬಾಲಕರು ಮತ್ತು 110 ಬಾಲಕಿಯರು ಇದ್ದು, ಇವರೊಂದಿಗೆ 40 ಸಹಾಯಕ ಸಿಬ್ಬಂದಿ ಕ್ರೀಡಾಕೂಟಕ್ಕೆ ತೆರಳಲಿದ್ದಾರೆ. ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ನಾವು ಅಗ್ರ ನಾಲ್ಕು ತಂಡಗಳಲ್ಲಿ ಒಂದೆನಿಸಿಕೊಂಡಿದ್ದೇವೆ. ಈ ಬಾರಿ ನಾವು ಅತ್ಯಂತ ಬಲಿಷ್ಠ ತಂಡವನ್ನು ಹೊಂದಿದ್ದು, ಅಗ್ರ ಎರಡನೇ ಸ್ಥಾನ ಪಡೆಯಲಿದ್ದೇವೆ ಎಂದು ತಂಡದ ಚೀಫ್ ಡಿ ಮಿಷನ್(ಸಿಡಿಎಂ) ಗಂಗಾಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ನೀನಾ ವೆಂಕಟೇಶ್, ಬಾಲಕರ ವಿಭಾಗದಲ್ಲಿ ಕಲ್ಪ್ ಎಸ್ ಬೊರಾ ಮತ್ತು ಉತ್ಕರ್ಷ್ ಪಾಟೀಲ್ ಈಜು ಸ್ಪರ್ಧೆಯಲ್ಲಿ ನಮ್ಮ ಪದಕ ಭರವಸೆ ಎಂದು ಗಂಗಾಧರ್ ಹೇಳಿದ್ದಾರೆ. ಕುಸ್ತಿಪಟುಗಳು, ಶಟ್ಲರ್‌ಗಳು ಮತ್ತು ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್‌ಗಳ ಬಗ್ಗೆಯೂ ಸಿಡಿಎಂ ಭರವಸೆ ವ್ಯಕ್ತಪಡಿಸಿದ್ದು, ವೈಯಕ್ತಿಕ ವಿಭಾಗಗಳಲ್ಲಿ ಪದಕ ಗೆಲ್ಲುವ ಸಾಮರ್ಥ್ಯವಿದೆ ಎಂದಿದ್ದಾರೆ. ಇನ್ನು ತಂಡಗಳ ವಿಭಾಗದಲ್ಲಿ ಬಾಲಕರ ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್(ಬಾಲಕರು ಮತ್ತು ಬಾಲಕಿಯರು) ತಂಡಗಳು ಪದಕ ಗೆಲ್ಲಬಹುದು ಎನ್ನುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಕಳೆದ ಮೂರು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಸ್ಪರ್ಧಿಸಲಿರುವ ತಂಡ ಹೆಚ್ಚು ಸಿದ್ಧತೆ ನಡೆಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಮತ್ತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ದೇಶದಲ್ಲಿರುವ ಯುವ ಪ್ರತಿಭೆಗಳನ್ನು ಮುಖ್ಯಭೂಮಿಕೆಗೆ ತರಲು ಇಂತಹ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನಾರ್ಹ ಎಂದು ಗಂಗಾಧರ್ ಹೇಳಿದ್ದಾರೆ.