ಬೆಂಗಳೂರು:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯುಅಂತಿಮ ಕೀ-ಉತ್ತರ ಆಧರಿಸಿ, OMR ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶದ ಲೆಕ್ಕಾಚಾರ ಮಾಡಿದೆ. ಅದರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಶೇ.60ರಷ್ಟು ಅರ್ಹತಾ ಅಂಕಗಳು ಹಾಗೂ ಪ.ಜಾತಿ, ಪ್ರಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55ರಷ್ಟು ಅರ್ಹತಾ ಅಂಕ ಪರಿಗಣಿಸಲಾಗಿದೆ.
ಫಲಿತಾಂಶಕ್ಕೆ ತಡೆ:
ಅಭ್ಯರ್ಥಿಗಳಿಗೆ ಪೂರ್ವ ಮುದ್ರಿತ ಒಎಂಆರ್ ಪತ್ರಿಕೆಯಲ್ಲಿ ನೀಡಿದ ಸೂಕ್ತ ಅಂಕಣದಲ್ಲಿ ಅಭ್ಯರ್ಥಿಯು ತನ್ನ ಸಹಿ ಹಾಗೂ ಎಡಗೈ ಹೆಬ್ಬೆಟ್ಟಿನ ಗುರುತನ್ನು ಒತ್ತುವಂತೆ ಸ್ಪಷ್ಟವಾಗಿ ಸೂಚಿಸಿದ್ದರೂ ವಿವಿಧ ಜಿಲ್ಲಾ ಪರೀಕ್ಷಾ ಕೇಂದ್ರಗಳ 21 ಅಭ್ಯರ್ಥಿಗಳು ಒಎಂಆರ್ ಪತ್ರಿಕೆಯಲ್ಲಿ ತಮ್ಮ ಸಹಿ ಮಾಡಿಲ್ಲ. ಇದು ನಿಯಮದ ಪ್ರಕಾರ ಪರಿಶೀಲನೆಯಲ್ಲಿರುವುದರಿಂದ ಸದ್ಯ ಈ ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.
ಕಳೆದ ಆಗಸ್ಟ್ 22ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (KARTET-2021) ನಡೆಸಲಾಗಿತ್ತು. ಅಭ್ಯರ್ಥಿಗಳಿಗೆ QR ಕೋಡ್ ದತ್ತಾಂಶವನ್ನು ಹೊಂದಿರುವ ಪೂರ್ವಮುದ್ರಿತ OMR ಉತ್ತರ ಪತ್ರಿಕೆಯ ಹಾಳೆಗಳನ್ನು ನೀಡಲಾಗಿತ್ತು. ಪರೀಕ್ಷೆಯ ಕೀ ಉತ್ತರಗಳನ್ನು ಆಗಸ್ಟ್ 24 ಪ್ರಕಟಗೊಳಿಸಿ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶವಿತ್ತು.
ಬಳಿಕ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಒಟ್ಟು 4201 (ಪತ್ರಿಕೆ-1- 392 ಮತ್ತು ಪತ್ರಿಕೆ-2-3089 = ಒಟ್ಟು 4201) ಆಕ್ಷೇಪಣೆಗಳನ್ನು ಸ್ವೀಕರಿಸಿ, ಪರಿಶೀಲಿಸಲಾಗಿದೆ. ಪ್ರತಿ ವಿಷಯದ ತಜ್ಞರನ್ನೊಳಗೊಂಡ ಸಮಿತಿಯಿಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸಮಿತಿಯ ನೀಡಿದ ವರದಿಯನ್ನಾಧರಿಸಿ ಅಂತಿಮ ಕೀ-ಉತ್ತರಗಳನ್ನು ಸೆಪ್ಟೆಂಬರ್ 8ರಂದು ಪ್ರಕಟಿಸಲಾಗಿದೆ.
ಸರ್ಟಿಫಿಕೆಟ್ ಹೀಗೆ ಪಡೆಯಬಹುದು:ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ QR Code ಕೋಡ್ ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುತ್ತೆ. ಕೇಂದ್ರೀಕೃತ ದಾಖಲಾತಿ ಘಟಕದಿಂದ ಈ ಸಂಬಂಧ ಮುದ್ರಿತ ಅಂಕಪಟ್ಟಿಯನ್ನು ವಿತರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಬದಲಾಗಿ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ QR Code ಹೊಂದಿರುವ ಪ್ರಮಾಣ ಪತ್ರ ಪ್ರತಿಯನ್ನು ಪಡೆದುಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿರುವಂತೆ ನೋಂದಣಿ/ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ಲೈನ್ ಅರ್ಜಿಯಲ್ಲಿರುವಂತೆ) ನಮೂದಿಸಿ ಗಣಕೀಕೃತ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.