ಬೆಂಗಳೂರು: ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಯಾಗಿದ್ದ ಕರ್ನಾಟಕ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ.
ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗೈರಿನಿಂದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಸದನದ ಸದಸ್ಯರನ್ನು ಕೋರಿದರು. ಆಡಳಿತ ಪಕ್ಷ ಬಿಜೆಪಿಯ ಸದಸ್ಯರು, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮೂರು ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರೆ ಆರ್ಥಿಕ ಹೊರೆ ಬೀಳಲಿದೆ. ಇದರಿಂದ ಶಿಕ್ಷಣದ ಗುಣಮಟ್ಟ ವೃದ್ಧಿಸುವುದಿಲ್ಲ. ಈ ವಿಧೇಯಕವನ್ನು ಮರುಪರಿಶೀಲನೆ ನಡೆಸಿ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವ ಬಗ್ಗೆ ಚಿಂತನೆ ನಡೆಸುವುದು ಸೂಕ್ತ. ಹೀಗಾಗಿ ವಿಧೇಯಕ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಈ ವಿಧೇಯಕವು ಕಳೆದ ಸರ್ಕಾರದ ಅವಧಿಯಲ್ಲಿ ಸಿದ್ದಪಡಿಸಿದ್ದು, ನಮ್ಮ ಸರ್ಕಾರವು ಅನುಷ್ಠಾನಗೊಳಿಸುತ್ತಿದೆ ಅಷ್ಟೆ. ಈ ಹಿನ್ನೆಲೆಯಲ್ಲಿ ಸಹಕಾರ ನೀಡಿ ವಿಧೇಯಕ ಅಂಗೀಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ, ಸದಸ್ಯರು ಒಪ್ಪದೆ ಇದ್ದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದ್ಯಕ್ಕೆ ವಿಧೇಯಕವನ್ನು ತಡೆ ಹಿಡಿಯಿರಿ. ಅಲ್ಲದೇ, ಉಪಮುಖ್ಯಮಂತ್ರಿಗಳು ಸಹ ಇಲ್ಲ ಎಂದು ಹೇಳಿದರು. ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧೇಯಕವನ್ನು ತಡೆಹಿಡಿಯುವಂತೆ ಸಂಜ್ಞೆ ಮೂಲಕ ತಿಳಿಸಿದರು. ಆಗ ಮಾಧುಸ್ವಾಮಿ ಅವರು ವಿಧೇಯಕವನ್ನು ತಡೆಹಿಡಿದರು.
ಏನಿದು ವಿಧೇಯಕ?