ಬೆಂಗಳೂರು: ರಕ್ಷಣಾ ಪಡೆಯ ಮಹತ್ವಾಕಾಂಕ್ಷಿ ಯೋಜನೆ ಹಾಗು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಅಗ್ನಿಪಥ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಈ ರೀತಿಯ ಹಿಂಸಾಚಾರ ರಾಜ್ಯದಲ್ಲೂ ನಡೆಯುವ ಸಾಧ್ಯತೆಯಿದ್ದು, ನೈರುತ್ಯ ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಆರ್ಪಿಎಫ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಭದ್ರತಾ ವಿಭಾಗದ ರೈಲ್ವೇ ಅಧಿಕಾರಿಗಳು ಆಯಾ ವಿಭಾಗದ ರೈಲ್ವೇ ಪೊಲೀಸರಿಗೆ ಅಲರ್ಟ್ ಆಗಿರುವಂತೆ ತಿಳಿಸಿದ್ದಾರೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಎಚ್ಚರಿಕೆ ಕೊಡಲಾಗಿದೆ. ರೈಲ್ವೇ ಹಳಿಗಳ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ರೈಲು ತಡೆಯುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಸ್ತಿಗೆ ತಿಳಿಸಿದ್ದಾರೆ.