ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆ ಎಫೆಕ್ಟ್: ರಾಜ್ಯಕ್ಕೆ ಹೆಚ್ಚುವರಿಯಾಗಿ ಬೇಕಿದೆ 5,796 ಬಸ್​ಗಳು!

ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಂದ ಒಟ್ಟು 24,172 ಬಸ್​ಗಳಿದ್ದು, ಹೆಚ್ಚುವರಿಯಾಗಿ 5,796 ಬಸ್​ಗಳ ಅವಶ್ಯಕತೆ ಇದೆ.

bus
ಬಸ್

By ETV Bharat Karnataka Team

Published : Oct 6, 2023, 2:00 PM IST

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬಂದಿದ್ದು, ಬಸ್​ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. 4 ನಿಗಮಗಳಿಂದ ಸದ್ಯಕ್ಕೆ 24 ಸಾವಿರ ಬಸ್​ಗಳು ಸೇವೆ ಒದಗಿಸುತ್ತಿದ್ದರೂ ಶಕ್ತಿ ಯೋಜನೆಯ ಪರಿಣಾಮ ಹಾಗೂ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ ಇನ್ನು 5,700 ಬಸ್​ಗಳ ಅವಶ್ಯಕತೆ ಇದೆ ಎನ್ನುವುದು ತಿಳಿದು ಬಂದಿದೆ.

ಸದ್ಯಕ್ಕೆ ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳು ರಸ್ತೆ ಸಾರಿಗೆ ಸೇವೆಯನ್ನು ನೀಡುತ್ತಿದ್ದು, ರಾಜ್ಯಾದ್ಯಂತ ಬಸ್ ಸಂಚಾರದ ಮೂಲಕ ರಸ್ತೆ ಜಾಲವನ್ನು ಸಮರ್ಪಕವಾಗಿ ನಿಭಾಯಿಸುತ್ತಿವೆ. ಇದರಲ್ಲಿ ಕೆಎಸ್ಆರ್​ಟಿಸಿ​ಯದ್ದು ಸಿಂಹ ಪಾಲು ಎನ್ನಬಹುದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 8,143 ಬಸ್ ಗಳಿದ್ದು, 2,250 ಹೆಚ್ಚುವರಿ ಬಸ್​ಗಳ ಅವಶ್ಯಕತೆ ಇದೆ. ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 6607 ಬಸ್​ಗಳಿದ್ದು, 1891 ಹೆಚ್ಚುವರಿ ಬಸ್​ಗಳ ಅವಶ್ಯಕತೆ ಇದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4,856 ಬಸ್​ಗಳಿದ್ದು 1000 ಹೆಚ್ಚುವರಿ ಬಸ್​ಗಳ ಅವಶ್ಯಕತೆ ಇದೆ. ಇನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 4,566 ಬಸ್​ಗಳಿದ್ದು 655 ಹೆಚ್ಚುವರಿ ಬಸ್​ಗಳ ಅವಶ್ಯಕತೆ ಇದೆ. ಒಟ್ಟು ನಾಲ್ಕು ನಿಗಮಗಳಿಂದ 24,172 ಬಸ್​ಗಳಿದ್ದು ಇನ್ನು ಹೆಚ್ಚುವರಿಯಾಗಿ 5,796 ಬಸ್​ಗಳ ಅವಶ್ಯಕತೆ ಇದೆ.

ಬಸ್ ಖರೀದಿಗೆ ಮುಂದಾದ ನಿಗಮಗಳು : ಕೆಎಸ್ಆರ್​ಟಿಸಿಯಲ್ಲಿ 620 ಬಸ್​ಗಳ ಖರೀದಿಗೆ ಹಾಗೂ 300 ಎಲೆಕ್ಟ್ರಿಕ್ ಬಸ್​ಗಳನ್ನು ಜಿಸಿಸಿ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲು ಟೆಂಡರ್ ಕರೆಯಲಾಗಿದ್ದು, ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಬೇಡಿಕೆಗೆ ಅನುಗುಣವಾಗಿ ಮಾರ್ಗ ಸಮೀಕ್ಷೆ ಕೈಗೊಂಡು ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ.

ಬಿಎಂಟಿಸಿಯಲ್ಲಿ 921 ಜಿಸಿಸಿ ಮಾದರಿಯ ಎಲೆಕ್ಟ್ರಿಕ್ ಬಸ್​ಗಳನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಿದ್ದು, 840 ಡೀಸೆಲ್ ಬಸ್​ಗಳ ಖರೀದಿ ಹಾಗೂ 100 ಜಿಸಿಸಿ ಮಾದರಿ ಮಿನಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ನಡೆಸಲು ಹಾಗೂ 20 ಮಿನಿ ಎಲೆಕ್ಟ್ರಿಕ್ ಬಸ್​ಗಳ ಖರೀದಿ ಪ್ರಕ್ರಿಯೆ ಮಾಡಲಾಗುತ್ತಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 285 ಬಿಎಸ್-6 ಡೀಸೆಲ್ ಬಸ್​ಗಳ ಖರೀದಿಸುವ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅದಷ್ಟು ಬೇಗ ಹೊಸ ಬಸ್​ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 802 ಬಸ್​ಗಳ ಖರೀದಿ ಪ್ರಕ್ರಿಯೆ ನಡೆದಿದ್ದು, ಶಕ್ತಿ ಯೋಜನೆಯ ಬೇಡಿಕೆಗನುಸಾರ ಸಾರಿಗೆ ಸೇವೆ ಒದಗಿಸಲು ನಿರ್ಧರಿಸಲಾಗಿದೆ.

ಸಾರಿಗೆ ನಿಗಮಗಳಿಗೆ ಶಕ್ತಿಯ ಬಲ :ಶಕ್ತಿ ಯೋಜನೆಯಡಿ ಕೆಎಸ್ಆರ್​ಟಿಸಿಯ 6,239 ಬಸ್​ಗಳು, ಬಿಎಂಟಿಸಿಯ 5057 ಬಸ್​ಗಳು. ವಾಯುವ್ಯ ಸಾರಿಗೆಯ 3911 ಬಸ್​ಗಳು, ಕಲ್ಯಾಣ ಕರ್ನಾಟಕ ಸಾರಿಗೆಯ 4334 ಬಸ್​ಗಳು ಸೇವೆ ಒದಗಿಸುತ್ತಿವೆ. ಶಕ್ತಿ ಯೋಜನೆ ಜಾರಿಯಾದ ನಂತರ ದಿನನಿತ್ಯ ಸಂಚರಿಸುವ ಪ್ರಯಾಣಿಕರಲ್ಲಿ ಹೆಚ್ಚಳ ಕಂಡಿದ್ದು, ಕೆಎಸ್ಆರ್​ಟಿಸಿ ವ್ಯಾಪ್ತಿಯಲ್ಲಿ 4.49 ಲಕ್ಷ, ಬಿಎಂಟಿಸಿ ವ್ಯಾಪ್ತಿಯಲ್ಲಿ 11.13 ಲಕ್ಷ, ವಾಯುವ್ಯ ಸಾರಿಗೆಯಲ್ಲಿ 7.16 ಲಕ್ಷ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 2.14 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಇನ್ನು ಹೊಸ ಬಸ್​ಗಳನ್ನು ಹಂತ ಹಂತವಾಗಿ ನಿಗಮಗಳಿಗೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಇತ್ತೀಚೆಗಷ್ಟೇ ಒಂದಷ್ಟು ಬಸ್ ಗಳ ಸೇರ್ಪಡೆಯಾಗಿದೆ. ಮತ್ತಷ್ಟು ಬಸ್​ಗಳು ಸದ್ಯದಲ್ಲೇ ಸೇರ್ಪಡೆಯಾಗಲಿವೆ. ಅದೇ ರೀತಿ ಎಲ್ಲಾ ನಾಲ್ಕು ನಿಗಮಗಳಿಗೂ ಸದ್ಯದಲ್ಲೇ ಹೆಚ್ಚುವರಿಯಾಗಿ ಹೊಸ ಬಸ್​ಗಳ ಸೇರ್ಪಡೆಯಾಗಲಿದ್ದು, ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ಬರಲಿದೆ, ಬಸ್​ಗಳ ಕೊರತೆ ನೀಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :4 ತಿಂಗಳು ಪೂರೈಸಿದ ಶಕ್ತಿ ಯೋಜನೆ : NWKRTC ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಿಸಿದ ಮಹಿಳೆಯರೆಷ್ಟು, ಖರ್ಚೆಷ್ಟು?

ABOUT THE AUTHOR

...view details