ಬೆಂಗಳೂರು: ರಾಜ್ಯ ವಿಧಾನಸಭೆಯ 15ನೇ ಅಧಿವೇಶನಕ್ಕೆ ಎಲ್ಲಾ ಸದಸ್ಯರು ಹಾಜರಾಗಬೇಕೆಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ. ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನವು ಪ್ರಜಾಪ್ರಭುತ್ವದ ದೇಗುಲ ಎಂಬುದರ ಅರಿವು ಎಲ್ಲಾ ಸದಸ್ಯರಿಗೂ ಇದೆ. ಹಾಗಾಗಿ, ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಫೆಬ್ರವರಿ 10ರಿಂದ ನಡೆಯಲಿರುವ ಜಂಟಿ ಅಧಿವೇಶನ ಹಾಗೂ ಫೆಬ್ರವರಿ 17 ರಿಂದ ನಡೆಯಲಿರುವ ಆಯವ್ಯಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದನದ ಘನತೆ ಹೆಚ್ಚಿಸಬೇಕು. ಅಧಿವೇಶನದ ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಕೆಲವು ರಾಜಕೀಯ ಪಕ್ಷಗಳು ಹಾಗೂ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಗಮನಿಸಿದರೆ ತಮ್ಮ ಕೆಲಸ ಸುಲಭವಾಗಲಿದೆ ಎನಿಸುತ್ತದೆ. ಹೀಗಾಗಿ, ಅಧಿವೇಶನದ ಸಂದರ್ಭದಲ್ಲಿ ಸದಸ್ಯರ ಹಾಜರಾತಿ ಕುಸಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸೂಚ್ಯವಾಗಿ ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಳೆ ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಚಳಿಗಾಲದ ಅಧಿವೇಶನದ ನಂತರ ಹಾಗೂ ಜಂಟಿ ಅಧಿವೇಶನದ ನಡುವೆ ಸ್ವರ್ಗಸ್ಥರಾದ ಗಣ್ಯರಿಗೆ ಸಂತಾಪ ಸಲ್ಲಿಸಲಾಗುತ್ತದೆ. ಫೆಬ್ರವರಿ 13 ರಿಂದ ಸತತವಾಗಿ ನಾಲ್ಕು ದಿನಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯದ ಜೊತೆಗೆ ಎಂದಿನಂತೆ ಸದನದ ಕಾರ್ಯಕಲಾಪಗಳು ನಡೆಯುತ್ತವೆ ಎಂದು ಹೇಳಿದರು.
ಬಜೆಟ್ ಅಧಿವೇಶನ: ಫೆಬ್ರವರಿ 17ರಂದು ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಆಯವ್ಯಯ ಮಂಡಿಸುವುದರೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯ ಅಧಿವೇಶನ ಪ್ರಾರಂಭವಾಗಲಿದೆ. ಆಯವ್ಯಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 20ರಿಂದ 24ರ ವರೆಗೆ ಚರ್ಚೆ ನಡೆಯಲಿದೆ ಎಂದು ಪ್ರಕಟಿಸಿದ ಸಭಾಧ್ಯಕ್ಷರು 11 ದಿನಗಳ ಅಧಿವೇಶನದ ಅವಧಿಯಲ್ಲಿ 9 ದಿನಗಳು ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯಲ್ಲಿ ಚರ್ಚೆಯೂ ಒಳಗೊಂಡಂತೆ ಇತರೆ ಕಾರ್ಯಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.