ಬೆಂಗಳೂರು: ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಐಜಿಯಾಗಿ ಡಾ.ವೈ.ಎಸ್.ರವಿಕುಮಾರ್, ಮೈಸೂರು ನಗರದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾಗಿ ಡಾ. ದಿವ್ಯಾ ವಿ. ಗೋಪಿನಾಥ್, ಕಲಬುರಗಿ ನಗರದ ಪೊಲೀಸ್ ಕಮಿಷನರ್ ಆಗಿ ಚೇತನ್ ಆರ್, ಗುಪ್ತಚರ ಇಲಾಖೆಗೆ ಹನುಮಂತರಾಯ, ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನಾರಾಯಣ ಎಂ ಮತ್ತು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಡಾ.ಶಿವಕುಮಾರ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಇತ್ತೀಚೆಗೆ ನಡೆದ ಅಧಿಕಾರಿಗಳ ವರ್ಗಾವಣೆ ವಿವರ:ಈ ಮೊದಲು ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ಮತ್ತು ಬೆಳಗಾವಿ ವಲಯ ಆಯುಕ್ತ ಎಂ.ಜಿ.ಹಿರೇಮಠ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿತ್ತು. ಇದಕ್ಕೂ ಮೊದಲು, ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಗುಪ್ತಚರ ಇಲಾಖೆಯ ಎಸ್‌ಪಿಯಾಗಿ ಆರ್.ಚೇತನ್, ಮೈಸೂರು ಜಿಲ್ಲಾ ಎಸ್‌ಪಿಯಾಗಿ ಸೀಮಾ ಲಾಟ್ಕರ್, ಬೆಂಗಳೂರು ಅಪರಾಧ ವಿಭಾಗದ ಎಐಜಿಪಿಯಾಗಿ ಶಿವಪ್ರಕಾಶ್ ದೇವರಾಜು, ಮೈಸೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಮುತ್ತರಾಜ್.ಎಂ, ಗದಗ ಎಸ್‌ಪಿಯಾಗಿ ಬಾಬಾಸಾಬ್ ನ್ಯಾಮಗೌಡ ಅವರು ವರ್ಗಾವಣೆಯಾಗಿದ್ದರು.