ಕರ್ನಾಟಕ

karnataka

ETV Bharat / state

KSFC ಮುಂದೆ ಬೆಟ್ಟದಷ್ಟಾಗ್ತಿದೆ ಬಾಕಿ ಮೊತ್ತ : ಸಾಲ ವಸೂಲಾತಿಗಾಗಿ ನಿಗಮ ಕಸರತ್ತು - ಸಾಲ ವಸೂಲಾತಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನಿಗಮ ಕಸರತ್ತು

ಸಂಸ್ಥೆಯು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಸಮತೋಲನ, ಮಹಿಳಾ ಸಬಲೀಕರಣ, ಮೊದಲ ಪೀಳಿಗೆ ಉದ್ದಿಮೆದಾರರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ..

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

By

Published : Jul 18, 2021, 9:31 PM IST

ಬೆಂಗಳೂರು :ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ರಾಜ್ಯದ ಉದ್ದಿಮೆದಾರರಿಗೆ ದೀರ್ಘಾವಧಿ ಸಾಲ ನೀಡುವ ಸಲುವಾಗಿ ಸ್ಥಾಪಿಸಿರುವ ನಿಗಮವಾಗಿದೆ. ಸಣ್ಣ, ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾಲ ಸೌಲಭ್ಯ ನೀಡುತ್ತಾ ಬಂದಿರುವ ನಿಗಮ ಇದೀಗ ಸಾಲ ವಸೂಲಾತಿಗಾಗಿ ಹೆಣಗಾಡುವಂತಾಗಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯನ್ನು (ಕೆಎಸ್ ಎಫ್ ಸಿ) ರಾಜ್ಯ ಸರ್ಕಾರ 1959ರಲ್ಲಿ ಪ್ರಾರಂಭಿಸಿತ್ತು. ರಾಜ್ಯದಲ್ಲಿ ಹೊಸ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಸ್ಥಾಪಿಸಲು ಹಾಗೂ ಸ್ಥಾಪಿತವಾಗಿರುವ ಉದ್ದಿಮೆಗಳ ವಿಸ್ತರಣೆ, ಆಧುನಿಕರಣ ಮತ್ತು ವೈವಿಧ್ಯೀಕರಣಗೊಳಿಸಲು ದೀರ್ಘಾವಧಿಯ ಸಾಲ ನೀಡುತ್ತಿದೆ.

ಸಂಸ್ಥೆಯು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಸಮತೋಲನ, ಮಹಿಳಾ ಸಬಲೀಕರಣ, ಮೊದಲ ಪೀಳಿಗೆ ಉದ್ದಿಮೆದಾರರು ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಜ್ಯದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ.

ಸಾವಿರಾರು ಉದ್ಯಮಿಗಳಿಗೆ ಸಾಲ ನೀಡುತ್ತಿರುವ ನಿಗಮಕ್ಕೆ ಸಾಲ ವಸೂಲಾತಿಯೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಾಲ ಪಡೆದ ಉದ್ದಿಮೆದಾರರು ಸಾಲ ಮರುಪಾವತಿ ಮಾಡದೇ ಕೋಟ್ಯಂತರ ರೂಪಾಯಿ ಮೊತ್ತವನ್ನು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ನಿಗಮದ ನಿರ್ವಹಣೆಗೆ ತೀವ್ರ ಹಿನ್ನಡೆಯಾಗುತ್ತದೆ. ಸಾಲ ವಸೂಲಾತಿಗೆ ನಾನಾ ಕಸರತ್ತು ನಡೆಸುತ್ತಿರುವ ನಿಗಮ ಇದೀಗ ಸಾಲ ಮರುಪಾವತಿಗಾಗಿ ಉದ್ದಿಮೆದಾರರಿಗೆ ಒನ್ ಟೈಂ ಸೆಟ್ಲ್‌ಮೆಂಟ್ ಅವಕಾಶ ನೀಡಲು ಮುಂದಾಗಿದೆ. ಆ ಮೂಲಕ ಸಾಧ್ಯವಾದಷ್ಟು ಸಾಲದ ಮೊತ್ತವನ್ನು ವಸೂಲಾತಿ ಮಾಡಲು ನಿರ್ಧರಿಸಿದೆ.

ನಿಗಮ ನೀಡಿದ ಸಾಲ/ವಸೂಲಾತಿ ಸ್ಥಿತಿಗತಿ ಏನು?: ನಿಗಮ ಈವರೆಗೆ ರಾಜ್ಯದಲ್ಲಿ ಸುಮಾರು 18,000 ಕೋಟಿ ರೂ. ಮೊತ್ತದ ಸಾಲಗಳನ್ನು ವಿವಿಧ ಉದ್ದಿಮೆದಾರರಿಗೆ ನೀಡಿದೆ. 2018-19ರಲ್ಲಿ ನಿಗಮ 1098.73 ಕೋಟಿ ರೂ. ಸಾಲಕ್ಕೆ ಮಂಜೂರಾತಿ ನೀಡಿದೆ. ಆ ಪೈಕಿ 665.90 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಅದೇ 2019-20ರಲ್ಲಿ ನಿಗಮ 667.81 ಕೋಟಿ ರೂ. ಮೊತ್ತದ ಸಾಲಕ್ಕೆ ಮಂಜೂರಾತಿ ನೀಡಿದೆ. ಆದರೆ, ಸುಮಾರು 727.90 ಕೋಟಿ ರೂ. ಸಾಲ ವಿತರಿಸಿದೆ. ಇನ್ನು, 2020-21ರಲ್ಲಿ ನಿಗಮ ಕೇವಲ 432.95 ಕೋಟಿ ರೂ. ಸಾಲವನ್ನು ವಿತರಿಸಿದೆ.

2018-19ರಲ್ಲಿ ನಿಗಮ 736.35 ಕೋಟಿ ರೂ. ಸಾಲ ವಸೂಲಾತಿ ಮಾಡಿದೆ. 2019-20ರಲ್ಲಿ 745 ಕೋಟಿ ರೂ. ಸಾಲ ವಸೂಲಾತಿ ಗುರಿ ಹೊಂದಲಾಗಿತ್ತು. ಈ ಪೈಕಿ 720.85 ಕೋಟಿ ರೂ.‌ಸಾಲ ವಸೂಲಾತಿ ಮಾಡುವಲ್ಲಿ ಸಫಲವಾಗಿದೆ. ಇನ್ನು, 2020-21ರಲ್ಲಿ ನಿಗಮ 600 ಕೋಟಿ ರೂ. ಸಾಲ ವಸೂಲಾತಿ ಗುರಿ ಹೊಂದಿತ್ತು. ಈ ಪೈಕಿ 524.20 ಕೋಟಿ ರೂ. ಸಾಲವನ್ನು ವಸೂಲಾತಿ ಮಾಡಲು ಸಾಧ್ಯವಾಗಿದೆ ಎಂದು ನಿಗಮದ ಅಂಕಿ-ಅಂಶ ನೀಡಿದೆ.

ಅದೇ ನಿಗಮ 2021-22ನೇ ಸಾಲಿನ ಮೊದಲ ತ್ರೈ ಮಾಸಿಕದಲ್ಲಿ ಸುಮಾರು 175 ಕೋಟಿ ರೂ. ಸಾಲ ಮಂಜೂರಾತಿ ಗುರಿ ಹೊಂದಿದೆ. ಆದರೆ, ಮೇ ಅಂತ್ಯದವರೆಗೆ 27.54 ಕೋಟಿ ರೂ. ಸಾಲಕ್ಕೆ ಮುಂಜೂರಾತಿ ನೀಡಿದೆ. ಮೇ ಅಂತ್ಯದವರೆಗೆ 36.10 ಕೋಟಿ ರೂ. ಸಾಲ ವಿತರಿಸಿದೆ.

ಬೆಟ್ಟದಷ್ಟು ಸಾಲದ ಬಾಕಿ: ನಿಗಮಕ್ಕೆ ಸಾಲ ವಸೂಲಾತಿಯೇ ದೊಡ್ಡ ತಲೆನೋವಾಗಿದೆ. ಸಾಲ ಪಡೆದವರು ನಾನಾ ಕಾರಣ ಹೇಳಿ ಸಾಲ ಮರು ಪಾವತಿ ಮಾಡುತ್ತಿಲ್ಲ. ಇದರಿಂದ ನಿಗಮದ ಆರ್ಥಿಕ ನಿರ್ವಹಣೆ ಮೇಲೆ ಭಾರೀ ಹೊರೆ ಬೀಳುತ್ತಿದೆ. ನಿಗಮ ನೀಡಿರುವ ಅಂಕಿ-ಅಂಶದ ಪ್ರಕಾರ 2018-19ರಲ್ಲಿ 1948.87 ಕೋಟಿ ರೂ.‌ಸಾಲ ವಸೂಲಾತಿಯಾಗದೇ ಬಾಕಿ ಉಳಿದಿತ್ತು. 2019-20ರಲ್ಲಿ 2208.25 ಕೋಟಿ ರೂ. ಸಾಲ ಮರು ಪಾವತಿಯಾಗಿರಲಿಲ್ಲ.

2020-21ಸಾಲಿನಲ್ಲಿ ಬಾಕಿ‌ ಸಾಲದ ಮೊತ್ತ ಸುಮಾರು 2,500 ಕೋಟಿ ರೂ.ಗೂ ಅಧಿಕವಾಗಿದೆ. 2020-21 ಸಾಲಿನ ಮೊದಲಾರ್ಧ ವರ್ಷದಲ್ಲಿ ನಿಗಮ ಒಟ್ಟು 206.92 ಕೋಟಿ ರೂ. ಅನುತ್ಪಾದನಾ ಆಸ್ತಿ (NPA) ಹೊಂದಿತ್ತು.‌ ಅದೇ ದ್ವಿತೀಯಾರ್ಧ ವರ್ಷದಲ್ಲಿ ಸುಮಾರು 140 ಕೋಟಿ ರೂ. NPA ಹೊಂದಿದೆ. ಸಾಲದ ಬಾಕಿ ಮೊತ್ತ ವರ್ಷಂಪ್ರತಿ ವೃದ್ಧಿಸುತ್ತಿರುವುದು ನಿಗಮಕ್ಕೆ ಹೊರೆಯಾಗಿ ಪರಿಣಮಿಸಿದೆ.

ಸಾಲ ವಸೂಲಿಗೆ ನಿಗಮ ಹೊಸ ಪ್ಲಾನ್ :ಬೆಟ್ಟದಷ್ಟು ಬೆಳೆಯುತ್ತಿರುವ ಸಾಲದ ಬಾಕಿಯನ್ನು ವಸೂಲು ಮಾಡಲು ಸರ್ಕಾರ ಇದೀಗ ಒನ್ ಟೈಂ ಸೆಟ್ಲ್ ಮೆಂಟ್‌ಗೆ ಅವಕಾಶ ನೀಡಿದೆ. ಆ ಮೂಲಕ ಸಾಧ್ಯವಾದಷ್ಟು ಸಾಲದ ಮೊತ್ತದ ವಸೂಲಾತಿಗೆ ಸರ್ಕಾರ ನಿರ್ಧರಿಸಿದೆ. 2015ರಲ್ಲಿ ಸಾಲ ಮರು ಪಾವತಿಗಾಗಿ ಕೆಎಸ್ಎಫ್‌ಸಿ ಒನ್ ಟೈಂ ಸೆಟ್ಲ್‌ಮೆಂಟ್ ಯೋಜನೆಯನ್ನು ಜಾರಿಗೆ ತಂದಿತ್ತು.‌ ಈ ವೇಳೆ ಸುಮಾರು 10,000 ಉದ್ದಿಮೆದಾರರು ಇದರ ಲಾಭ ಪಡೆದಿದ್ದರು.

ಸಾಲ ಪಡೆದ ಉದ್ದಿಮೆದಾರರು ನಾನಾ ಸಮಸ್ಯೆಗಳನ್ನು ಹೇಳಿ ಸಾಲ‌ ಮರು ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ. ಹಲವು ವರ್ಷಗಳಿಂದ ಸಾಲ ಮರು ಪಾವತಿಸದೇ ಹಾಗೇ ಬಾಕಿ ಉಳಿಸಿದ್ದಾರೆ. ಇದೀಗ ಮತ್ತೆ ಒನ್ ಟೈಂ ಸೆಟ್ಲ್‌ಮೆಂಟ್​ಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸುಮಾರು 2,500 ಉದ್ದಿಮೆದಾರರು ಲಾಭ ಪಡೆಯಲಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಾಧ್ಯವಾದಷ್ಟು ಸಂಪನ್ಮೂಲ ಕ್ರುಢೀಕರಣಕ್ಕೆ ಮುಂದಾಗಿದೆ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ತಿಳಿಸಿದ್ದಾರೆ.

ABOUT THE AUTHOR

...view details