ಕರ್ನಾಟಕ

karnataka

ETV Bharat / state

ಉಪ ಚುನಾವಣೆ ಫಲಿತಾಂಶ : ರಾಜ್ಯ ರಾಜಕೀಯ ಭವಿಷ್ಯದ ಮೇಲೆ ಆಗುವ ಪರಿಣಾಮಗಳೇನು? - ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶ

ಬೆಳಗಾವಿ ಲೋಕಸಭೆ ಕ್ಷೇತ್ರ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ಆಡಳಿತಾರೂಢ ಬಿಜೆಪಿಯ ಮೇಲೆ ನಿರ್ಣಾಯಕ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಕಾರಣಗಳ ಸಂಪೂರ್ಣ ರೌಂಡ್ ಅಪ್..

karnataka-state-by-election-political-issue
ಉಪ ಚುನಾವಣೆ ಫಲಿತಾಂಶ

By

Published : Apr 30, 2021, 7:52 PM IST

ಬೆಂಗಳೂರು :ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಯಾವ ಪರಿಣಾಮವನ್ನೂ ಬೀರದಿರಬಹುದು. ಆದರೆ, ಅದು ರಾಜ್ಯ ರಾಜಕೀಯ ಭವಿಷ್ಯವನ್ನು ಸಂಕೇತಿಸುವಂತಿರುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಓದಿ: ಬೆಳಗಾವಿ, ಮಸ್ಕಿಯಲ್ಲಿ ಕೈ- ಕಮಲದ ನಡುವೆ ನೇರ ಹಣಾಹಣಿ.. ಬಸವಕಲ್ಯಾಣದಲ್ಲಿ ಲೆಕ್ಕಾಚಾರವೇ ಬೇರೆ

ಬೆಳಗಾವಿ ಲೋಕಸಭೆ ಕ್ಷೇತ್ರ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ಆಡಳಿತಾರೂಢ ಬಿಜೆಪಿಯ ಮೇಲೆ ನಿರ್ಣಾಯಕ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಕಾರಣಗಳಿವೆ.

ಯಾಕೆಂದರೆ, ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಸಹಜವಾಗಿಯೇ ಹೆಚ್ಚಿನ ಶಕ್ತಿ ಇರುತ್ತದೆ. ಅದರಲ್ಲೂ ಉಪಚುನಾವಣೆಗಳ ಕಣದಲ್ಲಿ ಎದುರಾಳಿಗಳನ್ನು ಕಂಗಾಲು ಮಾಡುವ ಕಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ.

2008ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಿಂದ ಹಿಡಿದು ಈಗಿನವರೆಗೆ ಸುಮಾರು ಐವತ್ತರಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಗಳನ್ನು ನೋಡಿರುವ ಯಡಿಯೂರಪ್ಪ ಕೂಡ ಒಂದು ರೀತಿಯ ಎನ್​ಕೌಂಟರ್ ಸ್ಪೆಷಲಿಸ್ಟ್ ಆಗಿ ಹೋಗಿದ್ದಾರೆ.

ಹೀಗಾಗಿ, ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯೇ ಇರಬಹುದು, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳೇ ಇರಬಹುದು, ಪಕ್ಷದ ಗೆಲುವಿಗಾಗಿ ಯಡಿಯೂರಪ್ಪ ರೂಪಿಸಿದ ತಂತ್ರಗಳು ಎದುರಾಳಿಗಳನ್ನು ಕಂಗೆಡಿಸಿವೆ. ಆದ್ದರಿಂದ ಈ ಉಪಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ಸರ್ಕಾರದ ಮೇಲೆ ದೊಡ್ಡ ಪರಿಣಾಮವನ್ನು ಬೀರುವುದಿಲ್ಲ.

ಹಾಗೊಂದು ವೇಳೆ ಉಪಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶವನ್ನು ಕಾಣದಿದ್ದರೂ ಸರ್ಕಾರದ ಮೇಲೆ ಆಗುವ ಪರಿಣಾಮಗಳೇನಿಲ್ಲ. ಆದರೆ, ಇದೇ ಮಾತನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ.

ಕುತೂಹಲದ ಸಂಗತಿ ಎಂದರೆ ಉಪಚುನಾವಣೆಗಳಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ, ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಗಳಿಸಲು ಕಾಂಗ್ರೆಸ್ ಪಕ್ಷ ದೊಡ್ಡ ಪ್ರಯತ್ನ ನಡೆಸಿದೆ. ಹಾಗೆ ಗೆದ್ದರೆ ತನಗೆ ಭವಿಷ್ಯ ಎಂಬುದು ಕಾಂಗ್ರೆಸ್ ನಂಬಿಕೆ.

ಜೆಡಿಎಸ್ ತಂತ್ರ :ಜೆಡಿಎಸ್​ಗೆ ಗೆಲುವು ಮುಖ್ಯವೇ ಅಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಸೋಲಿನಲ್ಲೇ ಅದರ ಭವಿಷ್ಯ ಅಡಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಒಂದು, ಎರಡು ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಅದು ತನ್ನ ಭವಿಷ್ಯಕ್ಕೆ ಮಾರಕ ಎಂಬುದು ಜೆಡಿಎಸ್ ನಂಬಿಕೆ. ಹೀಗಾಗಿ, ಅದು ಉಪಚುನಾವಣೆಗಳ ವಿಷಯದಲ್ಲಿ ತನ್ನದೇ ತಂತ್ರ ರೂಪಿಸಿದೆ.

ಮೊದಲನೆಯದಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಅದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿಯೇ ಕಣಕ್ಕಿಳಿಸಿದೆ. ಹೀಗೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ಅದಕ್ಕಿರುವ ಕಣ್ಣು ಉಳಿದಂತೆ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಮೇಲಿಲ್ಲ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿದರೆ ಬಿಜೆಪಿಯ ಪ್ರತಾಪ್ ಗೌಡ ಪಾಟೀಲರಿಗೆ ಹೊಡೆತ ಬಿದ್ದು, ಕಾಂಗ್ರೆಸ್ ಕ್ಯಾಂಡಿಡೇಟ್‌ಗೆ ಅನುಕೂಲವಾಗಬಹುದು ಎಂಬುದು ಅದರ ಯೋಚನೆ.

ವಾಸ್ತವವಾಗಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾಗಿ, ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಲ್ಲಿ ಪ್ರತಾಪ್ ಗೌಡ ಪಾಟೀಲ್ ಕೂಡ ಒಬ್ಬರು. ಆದರೆ, ಉಪಚುನಾವಣೆಗಳು ಘೋಷಣೆಯಾದಾಗಿನಿಂದ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ಮುಂದಿರುವಂತೆ ಭಾಸವಾಗಿತ್ತು.

ಪರಿಸ್ಥಿತಿ ಹೀಗಿದ್ದಾಗ ಜೆಡಿಎಸ್ ವತಿಯಿಂದ ಪ್ರಬಲ ಕ್ಯಾಂಡಿಡೇಟ್ ಕಣಕ್ಕಿಳಿದರೆ ಅದು ಪ್ರತಾಪ್ ಗೌಡ ಪಾಟೀಲರಿಗೆ ಹೊಡೆತ ಕೊಟ್ಟು ಕಾಂಗ್ರೆಸ್ಗೆ‌ ಅನುಕೂಲ ಮಾಡಿಕೊಡುತ್ತದೆ ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ.

ಹೀಗಾಗಿ, ಕಾಂಗ್ರೆಸ್ ಗೆಲುವಿಗೆ ಅವಕಾಶ ಮಾಡಿಕೊಡುವ ಕೆಲಸವನ್ನು ನಾವೇಕೆ ಮಾಡಬೇಕು? ಅಂತ ಮಸ್ಕಿ ಕ್ಷೇತ್ರದ ವಿಷಯದಲ್ಲಿ ಜೆಡಿಎಸ್ ಜಾಣ ಮೌನವಹಿಸಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವಿಷಯದಲ್ಲೂ ಅಷ್ಟೇ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಬೇಕು ಎಂಬುದೇ ಜೆಡಿಎಸ್ ಪರಮಗುರಿ. ಹೀಗಾಗಿ, ಆ ಕ್ಷೇತ್ರಗಳ ಕಡೆ ಅದು ಹೆಚ್ಚು ಗಮನ ಕೊಡಲಿಲ್ಲ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನೇ ನೋಡಿ, ಶುರುವಿನಲ್ಲಿ ಅಲ್ಲಿ ಬಿಜೆಪಿಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಯಾಕೆಂದರೆ, ತನಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ಬಂಡಾಯವೆದ್ದಿದ್ದರು.

ಹೀಗೆ ಬಂಡಾಯವೆದ್ದ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಶರಣು ಸಲಗಾರ್ ಅವರ ವಿರುದ್ಧ ಸ್ಪರ್ಧಿಸಿದರು. ಇದರಿಂದಾಗಿ ತ್ರಿಕೋನ ಸ್ಪರ್ಧೆಗೆ ಕ್ಷೇತ್ರ ಮಿತಗೊಂಡಿದ್ದರೆ, ಕಾಂಗ್ರೆಸ್​​ನ ಮಲ್ಲಮ್ಮ ನಾರಾಯಣರಾವ್ ಅವರ ಗೆಲುವು ಸುಲಭವಾಗುತ್ತಿತ್ತು ಮತ್ತು ಬಿಜೆಪಿ ಸೋಲುವ ಸಾಧ್ಯತೆ ಹೆಚ್ಚಿತ್ತು.

ಆದರೆ, ಅಲ್ಲಿ ಜೆಡಿಎಸ್ ಈಗ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಕಿರಿಕಿರಿಯಾಗಿದೆ. ಅಷ್ಟೇ ಅಲ್ಲ, ಜೆಡಿಎಸ್​​ನ ಈ ಸ್ಪರ್ಧೆ ಬಿಜೆಪಿಗೆ ವರವಾಗುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲಿಗೆ ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೂ ಪರವಾಗಿಲ್ಲ. ಆದರೆ, ಕಾಂಗ್ರೆಸ್ ಗೆಲ್ಲಕೂಡದು ಎಂಬುದು ಜೆಡಿಎಸ್‌ನ ಏಕ ಸಾಲಿನ ನಿರ್ಣಯ.

ಅದು ಹೀಗೆ ಬಯಸಲೂ ಕಾರಣವಿದೆ. ಅದೆಂದರೆ ವಿಧಾನಸಭಾ ಚುನಾವಣೆಗಳಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುವ ಶಕ್ತಿ ಅದಕ್ಕಿಲ್ಲ. 1999ರಲ್ಲಿ ಜನತಾ ಪರಿವಾರ ಒಡೆದು ಎರಡು ಹೋಳಾಯಿತಲ್ಲ? ಆ ಸಂದರ್ಭದಲ್ಲಿ ಅದರ ಗರ್ಭದಿಂದ ಸಂಯುಕ್ತ ಜನತಾದಳ ಮತ್ತು ಜಾತ್ಯಾತೀತ ಜನತಾದಳ ಜನ್ಮ ತಾಳಿದವು.

ಈ ಪೈಕಿ ಸಂಯುಕ್ತ ಜನತಾದಳದ ಬಹುತೇಕ ನಾಯಕರು ಬಿಜೆಪಿಯಲ್ಲಿ ಲೀನವಾದರು. ಹೀಗೆ ಜನತಾ ಪರಿವಾರದ ಗರ್ಭದಿಂದ ಜನ್ಮ ತಾಳಿದ ಎರಡು ಶಕ್ತಿಗಳ ಪೈಕಿ ಒಂದು ಶಕ್ತಿ ಬಿಜೆಪಿಯಲ್ಲಿ ಲೀನವಾದ ಮೇಲೆ ಉಳಿದಿದ್ದು, ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾದಳ ಮಾತ್ರ.

ಜನತಾ ಪರಿವಾರ ಒಗ್ಗಟ್ಟಾಗಿದ್ದಾಗ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣಬಹುದಿತ್ತು. ಆದರೆ, ಈಗ ಉಳಿದುಕೊಂಡಿರುವ ಜೆಡಿಎಸ್ ಅಂತಹ ಕನಸನ್ನು ಕಾಣುವುದು ಕಷ್ಟ.

ಮೈತ್ರಿ ಸರ್ಕಾರಗಳು :ಇಪ್ಪತ್ತು ವರ್ಷಗಳಿಗೂ ಹಿಂದೆ ಜೆಡಿಎಸ್ ಒಂದು ತೀರ್ಮಾನಕ್ಕೆ ಬಂತು. ಅದು ಏನೆಂದರೆ ತಾನು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗದೇ ಇರಬಹುದು. ಆದರೆ, ತನ್ನನ್ನು ಹೊರತುಪಡಿಸಿ ಬೇರೆಯವರು ಸರ್ಕಾರ ರಚಿಸಲೂ ಸಾಧ್ಯವಾಗಬಾರದು ಎಂಬುದು ಅದರ ತೀರ್ಮಾನ.

ಅದರ ಈ ತೀರ್ಮಾನಕ್ಕೆ ಅನುಗುಣವಾದ ತೀರ್ಪು ಬರಲು ಬಹುಕಾಲ ಬೇಕಾಗಲಿಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಬಂದರೆ, ಕಾಂಗ್ರೆಸ್ ಪಕ್ಷ 65 ಸೀಟುಗಳೊಂದಿಗೆ 2ನೇ ಸ್ಥಾನಕ್ಕಿಳಿಯಿತು. ಆ ಸಂದರ್ಭದಲ್ಲಿ ಜೆಡಿಎಸ್ ಪಡೆದಿದ್ದು 58 ಸ್ಥಾನ ಮಾತ್ರ.

ಆದರೆ, ಅವತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ಸರ್ಕಾರ ರಚಿಸುವ ಸ್ಥಿತಿಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳೂ ಇರಲಿಲ್ಲ. ಪರಿಣಾಮ ಅಂದು ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂತು.

ಇದಾದ ನಂತರ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದೆ ಎಂದು ಆರೋಪಿಸಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮೈತ್ರಿಕೂಟ ಸರ್ಕಾರ ಉರುಳಿಸಿ ಬಿಜೆಪಿಯ ಜತೆ ಕೈಜೋಡಿಸಿ ಸರ್ಕಾರ ರಚಿಸಿದರು. ಮುಂದೆ 2008 ಮತ್ತು 2013ರಲ್ಲಿ ಜೆಡಿಎಸ್ ಬಯಕೆ ಈಡೇರಲಿಲ್ಲ ಎಂಬುದು ನಿಜವಾದರೂ, 2018ರ ಚುನಾವಣೆಯಲ್ಲಿ ಅದರ ಬಯಕೆಗೆ ತಕ್ಕ ಫಲಿತಾಂಶ ಬಂತು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಕಾರಣಕ್ಕಾಗಿ ಕೈ ಪಾಳೆಯದ ನಾಯಕರೇ ದೇವೇಗೌಡರ ಮನೆ ಮುಂದೆ ಪರೇಡ್ ನಡೆಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದರು. ಈ ಸರ್ಕಾರ ಹೇಗೆ ಉರುಳಿ ಬಿತ್ತು ಎಂಬುದು ರಹಸ್ಯವೇನಲ್ಲ.

ಅದರೆ, ಮುಂದಿನ ಚುನಾವಣೆಯಲ್ಲಿ ಪುನಾ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರೂಪುಗೊಳ್ಳಲಿ ಎಂದು ಜೆಡಿಎಸ್ ತವಕಿಸುತ್ತಿದೆ. ಮತ್ತು ಅದರ ತವಕಕ್ಕೆ ಪೂರಕವಾದ ಪರಿಸ್ಥಿತಿಯೂ ಸೃಷ್ಟಿಯಾಗುತ್ತಿದೆ. ಉದಾಹರಣೆಗೆ ಬಿಜೆಪಿಯನ್ನೇ ತೆಗೆದುಕೊಳ್ಳಿ, ಮುಂದಿನ ಚುನಾವಣೆಯ ವೇಳೆಗೆ ಆ ಪಕ್ಷದ ಮುಂಚೂಣಿಯಲ್ಲಿ ಯಡಿಯೂರಪ್ಪ ನಿಂತಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ದಿನ ಕಳೆದಂತೆ ಯಡಿಯೂರಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಕಳೆದ ಚುನಾವಣೆಯ ತನಕ ಸುಭದ್ರವಾಗಿದ್ದ ಲಿಂಗಾಯತ ಮತ ಬ್ಯಾಂಕ್ ಈಗ ಅದೇ ಸ್ಥಿತಿಯಲ್ಲಿಲ್ಲ. ಪಂಚಮಸಾಲಿ ಸಮುದಾಯದ ಹೋರಾಟದಿಂದ ಹಿಡಿದು, ಹಲವು ಕಾರಣಗಳಿಗಾಗಿ ಯಡಿಯೂರಪ್ಪ ಅವರ ಶಕ್ತಿ ಕ್ರಮೇಣ ಕುಗ್ಗುತ್ತಿದೆ.

ಹೀಗಿರುವಾಗ ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿ ಸೈನ್ಯದ ಮುಂದೆ ಅವರು ಕಾಣದೆ ಹೋದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರುತ್ತದೆ. ಯಾರೇನೇ ಹೇಳಲಿ. ಆದರೆ, ಇವತ್ತಿಗೂ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ.

ಇದು ಗೊತ್ತಿದ್ದರೂ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ ತೀವ್ರವಾಗಿದೆ. ಮುಂದಿನ ಚುನಾವಣೆಯ ತನಕ ಯಡಿಯೂರಪ್ಪ ಅವರು ಪಕ್ಷದ ನೇತೃತ್ವ ವಹಿಸಿಕೊಂಡಿರುತ್ತಾರೆ ಎಂದು ಹೇಳುವ ಸ್ಥಿತಿ ಇಲ್ಲ.

ಓದಿ: ಕಮಿಷನ್ ಹೊಡೆಯುವುದು ಸಾಕು, ಖಾಸಗಿ ಆಸ್ಪತ್ರೆಗಳ ಬಿಲ್ ಕ್ಲಿಯರ್ ಮಾಡಿ: ಡಿಕೆಶಿ

ಮುಂದಿನ ಚುನಾವಣೆಯಲ್ಲಿ ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಬಿಜೆಪಿಗೆ ಇರುವುದಿಲ್ಲ. ಇನ್ನು, ಕಾಂಗ್ರೆಸ್‌ನಲ್ಲೂ ಅಂತಃಕಲಹದ ಬೆಂಕಿ ಉರಿಯುತ್ತಿದೆ. ಅಲ್ಲಿ ಭವಿಷ್ಯದ ಮುಖ್ಯಮಂತ್ರಿಗಳಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪೈಪೋಟಿ ನಡೆಸುತ್ತಿದ್ದಾರೆ.

ಹೀಗಾಗಿ, ಕಾಂಗ್ರೆಸ್ ಪಕ್ಷ ಕೂಡ ಸ್ವಯಂ ಬಲದ ಮೇಲೆ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯುವುದು ಕಷ್ಟ. ಅಂತಹ ಪರಿಸ್ಥಿತಿಯನ್ನು ಊಹಿಸಿರುವ ದೇವೇಗೌಡ ಮತ್ತು ಕುಮಾರಸ್ವಾಮಿ ಆ ಪರಿಸ್ಥಿತಿಯಲ್ಲಿ ತಾವೇನು ಮಾಡಬಹುದು? ಎಂಬುದನ್ನು ಲೆಕ್ಕ ಹಾಕುತ್ತಿದ್ದಾರೆ.

ಅದಕ್ಕಿರುವ ಅನುಕೂಲವೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಗೊಂದಲ. ಕಾಂಗ್ರೆಸ್‌ನಲ್ಲಿ ಜಮೀರ್ ಅಹ್ಮದ್ ಅವರನ್ನು ಅಲ್ಪಸಂಖ್ಯಾತ ನಾಯಕರನ್ನಾಗಿಸಲು ಹೊರಟಿರುವ ಸಿದ್ಧರಾಮಯ್ಯ ವಿರುದ್ಧ, ಅವರ ಪಕ್ಕದಿಂದಲೇ ಸಿ.ಎಂ.ಇಬ್ರಾಹಿಂ ಅವರನ್ನು ಎಳೆದುಕೊಳ್ಳಲು ಜೆಡಿಎಸ್ ಹೊರಟಿದೆ.

ಯಾರೇನೇ ಹೇಳಿದರೂ ಮುಸ್ಲಿಂ ನಾಯಕರ ಪೈಕಿ ಇವತ್ತಿಗೂ ಜನಪ್ರಿಯರಾಗಿರುವ ಸಿ.ಎಂ.ಇಬ್ರಾಹಿಂ ಜೆಡಿಎಸ್ ಪಾಳೆಯಕ್ಕೆ ಕಾಲಿಟ್ಟರೆ ಸಹಜವಾಗಿಯೇ ಮುಸ್ಲಿಂ ಸಮುದಾಯದ ಮತಗಳು ಒಂದು ಪ್ರಮಾಣದಲ್ಲಿ ಜೆಡಿಎಸ್‌ನತ್ತ ವಾಲಿಕೊಳ್ಳಲಿವೆ. ಹಾಗಾದಾಗ ಸಹಜವಾಗಿಯೇ ಜೆಡಿಎಸ್ ಗಳಿಕೆ ಐವತ್ತು ಸೀಟುಗಳ ಆಸು-ಪಾಸಿಗೆ ತಲುಪಲಿದೆ.

ಹಾಗೇನಾದರೂ ಆಗಿ, ಬಿಜೆಪಿ ಮತ್ತು ಕಾಂಗ್ರೆಸ್ ಗಳಿಕೆ ಎಪ್ಪತ್ತು, ಎಂಭತ್ತು ಸ್ಥಾನಗಳ ಅಕ್ಕಪಕ್ಕ ನಿಂತರೆ ಅನುಮಾನವೇ ಬೇಡ. ಮುಂದಿನ ಚುನಾವಣೆಯ ನಂತರ ಕರ್ನಾಟಕ ಮತ್ತೊಮ್ಮೆ ಮೈತ್ರಿ ಸರ್ಕಾರವನ್ನು ನೋಡಬೇಕಾಗುತ್ತದೆ.

ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕಣ್ಣ ಮುಂದಿರುವ ಭವಿಷ್ಯದ ಚಿತ್ರ ಇದು. ಆದರೆ, ಇಂತಹ ಚಿತ್ರ ರೂಪುಗೊಳ್ಳಬೇಕೆಂದರೆ ಅಲ್ಲಿಯ ತನಕ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಮೇಲೇಳದಂತೆ ಅದು ನೋಡಿಕೊಳ್ಳಬೇಕು.

ಹಾಗೆ ಕಾಂಗ್ರೆಸ್ ಪಕ್ಷ ಮೇಲೇಳದಂತೆ ನೋಡಿಕೊಳ್ಳುವ ಸಲುವಾಗಿಯೇ ಇತ್ತೀಚಿನ ಎಲ್ಲ ಉಪಚುನಾವಣೆಗಳಲ್ಲೂ ಅದು ಬಿಜೆಪಿಯ ಗೆಲುವಿಗೆ ಸಹಕಾರ ನೀಡಿದೆ. ರಾಜರಾಜೇಶ್ವರಿ ನಗರದಿಂದ ಹಿಡಿದು ಎಲ್ಲ ಕಡೆ ಅದು ನೀಡಿದ ಸಹಕಾರ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಿಕೊಟ್ಟಿದೆ.

ಕೊರೊನಾ ಸಂಕಷ್ಟದ ನಡುವೆ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಚರ್ಚೆಯ ಮುನ್ನೆಲೆಗೆ ಬಂದಿದ್ದು, ಮೇ 2 ರಂದು (ಭಾನುವಾರ) ನಡೆಯಲಿರುವ ಮತಗಳ ಎಣಿಕೆ ನಂತರ ಕದನ ಕುತೂಹಲಕ್ಕೆ ತೆರೆ ಬೀಳಲಿದೆ.

ABOUT THE AUTHOR

...view details