ಬೆಂಗಳೂರು: ರಾಜ್ಯದ ಆಯವ್ಯಯ ಪ್ರಮುಖವಾದ ದಾಖಲೆ. ಬಜೆಟ್ ಬಗ್ಗೆ ಸಮಗ್ರವಾಗಿ ಚರ್ಚೆ ಆಗಲೇಬೇಕು. ಎಲ್ಲಾ ಸದಸ್ಯರಿಗೂ ಚರ್ಚಿಸುವ ಹಕ್ಕಿದೆ. ಅಧಿವೇಶನದಲ್ಲಿ ಯಾವುದೇ ವಿಚಾರಗಳ ಚರ್ಚೆಗೆ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ಬಜೆಟ್ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದ ಸಂದರ್ಭ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು, ಆಯವ್ಯಯ ಎಂಬುದು ಒಂದು ಪ್ರಮುಖ ದಾಖಲೆ. ಯಾವ ವರ್ಗಕ್ಕೆ ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತದೆ ಎಂಬುದರ ಕುರಿತು ಒಂದು ತಿಂಗಳ ಕಾಲ ಚರ್ಚೆಯಾಗುತ್ತದೆ. ಎಲ್ಲ ಸದಸ್ಯರಿಗೂ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ ಎಂದರು.
ಪ್ರತಿಪಕ್ಷದ ನಾಯಕರು ಎರಡು ದಿನಗಳ ಕಾಲ ಬಜೆಟ್ ಮೇಲೆ ಮಾತನಾಡಿದ್ದಾರೆ. ಈ ವೇಳೆ, ಕೆಲವು ಮೂಲಭೂತ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. 13 ಬಜೆಟ್ ಮಂಡಿಸಿದವರು ನಮ್ಮ ಬಜೆಟ್‍ಗಿಂತ ಅವರ ಬಜೆಟ್ ಬಗ್ಗೆಯೇ ಹೆಚ್ಚು ಹೇಳಿದ್ದಾರೆ. ಅವರೂ ಸೇರಿದಂತೆ ಎಲ್ಲ ಸದಸ್ಯರು ಮಾತನಾಡಿದ್ದಕ್ಕೆ ಉತ್ತರ ಕೊಡುತ್ತೇವೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಜೆಡಿಎಸ್ ಶಾಸಕಾಂಗದ ನಾಯಕರು ಬಜೆಟ್ ಮಂಡಿಸಿದವರು. ವಿರೋಧ ಪಕ್ಷದ ನಾಯಕರು ಯಾವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಅಡ್ಡಿಪಡಿಸುವುದು ಬೇಡ ಎಂದು ಹೇಳಿದರು.