ಕರ್ನಾಟಕ

karnataka

ETV Bharat / state

ರಾಜ್ಯ ಉಪ'ಸಮರ': ಬಿಎಸ್​ವೈ ಹೊಸ ತಂತ್ರ.. ಸಿದ್ದರಾಮಯ್ಯ ಏಕಾಂಗಿ ಹೋರಾಟ..'ದಳಪತಿ' ಲೆಕ್ಕಚಾರ

ಒಂದೆಡೆ ಆಡಳಿತರೂಢ ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಆತುರ. ಇನ್ನೊಂದೆಡೆ ವಿರೋಧ ಪಕ್ಷ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಿಸಿಕೊಳ್ಳುವ ತವಕ. ಮತ್ತೊಂದೆಡೆ ಜೆಡಿಎಸ್​ಗೆ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ. ಇದು ರಾಜ್ಯ ರಾಜಕಾರಣದ ಸದ್ಯದ ಪರಿಸ್ಥಿತಿ.

ವಿಧಾನಸಭೆ ಉಪಚುನಾವಣೆ

By

Published : Nov 25, 2019, 11:17 PM IST

ಬೆಂಗಳೂರು : ವಿಧಾನಸಭೆ ಉಪ ಚುನಾವಣೆಯು ಮೂರು ಪಕ್ಷಗಳ ನಾಯಕರಿಗೆ ಒಂದು ರೀತಿಯ ಅಗ್ನಿ ಪರೀಕ್ಷೆಯಂತಾಗಿದೆ.

ಹೊಸ ತಂತ್ರ ಹೆಣೆಯುತ್ತಿರುವ ಬಿಎಸ್​ವೈ

ಸಿಎಂ ಬಿ.ಎಸ್. ಯಡಿಯೂರಪ್ಪನವರ ಕುರ್ಚಿ ಭದ್ರಗೊಳ್ಳಲು, ಉಪಚುನಾವಣೆಯಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಈ ಹಿನ್ನೆಲೆ ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು, ಬಿಎಸ್​ವೈ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿದ್ದರೂ, ಇದೀಗ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಪ್ರಸ್ತುತ 105 ಶಾಸಕರನ್ನು ಹೊಂದಿರುವ ಬಿಜೆಪಿಗೆ, ಸರಳ ಬಹುಮತ ಪಡೆಯಲು ಎಂಟು ಶಾಸಕರು ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ಯಡಿಯೂರಪ್ಪನವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿದ್ದಾರೆ.

ಪಕ್ಷದಲ್ಲಿ ವರ್ಚಸ್ಸಿಗಾಗಿ ಸಿದ್ದರಾಮಯ್ಯ ಏಕಾಂಗಿ ಹೋರಾಟ

ಇನ್ನು ಪಕ್ಷದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ತವಕದಲ್ಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೂ ಈ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಪಕ್ಷದಲ್ಲಿ ಹಲವರ ವಿರೋಧದ ನಡುವೆಯೂ, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಮೂಲ ಮತ್ತು ವಲಸಿಗ ನಾಯಕರ ನಡುವೆ ಮುನಿಸು ಉಂಟಾಗಿದೆ. ಹಾಗಾಗಿ ಸಿದ್ದರಾಮಯ್ಯನವರು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಹೊರತುಪಡಿಸಿದರೆ ಬೇರೆ ಯಾವ ನಾಯಕರೂ ಸಹ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ. ಇದು ಸಿದ್ದರಾಮಯ್ಯನವರಿಗೆ ನುಂಗಲಾರದ ತುತ್ತಾಗಿದ್ದು, ಹತ್ತಕ್ಕೂ ಹೆಚ್ಚು ಸ್ಥಾನ ಗಳಿಸಬೇಕೆಂಬುದು ಸಿದ್ದರಾಮಯ್ಯನವರ ತಂತ್ರಗಾರಿಕೆಯಾಗಿದೆ. ಆದರೆ ಮತದಾರ ಕಾಂಗ್ರೆಸ್ 'ಕೈ'ಹಿಡಿಯುವನೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಒಂದು ವೇಳೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಉತ್ಸಾಹದಲ್ಲಿರುವ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ತಮ್ಮ ನಾಯಕತ್ವಕ್ಕೆ ಸಿಕ್ಕ ಜಯ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವೂ ಅಡಗಿದೆ. ಉಪಚುನಾವಣೆ ಫಲಿತಾಂಶದಲ್ಲಿ ತಾವು ಎಷ್ಟು ಪ್ರಬಲರು ಎಂಬುದನ್ನು ಸಾಬೀತುಪಡಿಸಿಕೊಳ್ಳಬೇಕಿರುವ ಸಿದ್ದರಾಮಯ್ಯ ಇದಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ.

ಮತ್ತೆ ಕಿಂಗ್ ಮೇಕರ್ ಆಗಲು 'ದಳಪತಿ' ಲೆಕ್ಕಾಚಾರ

ಉಪ ಸಮರ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರಿಗೆ ಒಂದು ರೀತಿಯ ಅಗ್ನಿಪರೀಕ್ಷೆಯಾದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೊಂದು ರೀತಿಯ ಬಿಕ್ಕಟ್ಟು ಎದುರಾಗಿದೆ. ಈ ಉಪ ಚುನಾವಣೆ ಅವರಿಗೆ ಅನಿವಾರ್ಯವಾಗಿದೆ. ಕನಿಷ್ಠ 5 ಕ್ಷೇತ್ರಗಳನ್ನಾದರೂ ಗೆದ್ದು ಮತ್ತೆ ಕಿಂಗ್ ಮೇಕರ್ ಆಗಬೇಕೆಂಬುದು ಹೆಚ್​ಡಿಕೆ ಲೆಕ್ಕಾಚಾರ. ಸಹಜವಾಗಿ ಬಿಜೆಪಿ ಬಹುಮತ ಪಡೆಯಲು ವಿಫಲವಾದರೆ ಜೆಡಿಎಸ್​ಗೆ ಬೇಡಿಕೆ ಹೆಚ್ಚಾಗಲಿದೆ. ಈ ಕುರಿತು ಲೆಕ್ಕಾಚಾರ ಹಾಕಿರುವ ಜೆಡಿಎಸ್ ದಳಪತಿ, ತಮ್ಮ ಪಕ್ಷದ ಭದ್ರಕೋಟೆಗಳಾದ ಕೆ.ಆರ್. ಪೇಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ ಹೆಚ್​ಡಿಕೆ ಅವರ ಕೆಲ ದ್ವಂದ್ವ ಹೇಳಿಕೆಗಳಿಂದ ಪಕ್ಷದಲ್ಲೇ ಗೊಂದಲ ಉಂಟಾಗುತ್ತಿದೆ.

ಒಮ್ಮೆ ಬಿಜೆಪಿಯನ್ನು ಅಸ್ಥಿರಗೊಳಿಸುವುದಿಲ್ಲ ಎನ್ನುತ್ತಾರೆ, ಮತ್ತೊಮ್ಮೆ ಎಲ್ಲ ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪರ ಮಾತನಾಡುತ್ತಾರೆ. ಇದರ ನಡುವೆ ಡಿಸೆಂಬರ್ 9ರ ನಂತರ ನಾನು ಯಾರಿಗೆ ಬೆಂಬಲ ನೀಡುತ್ತೇನೆಂದು ಕಾದು ನೋಡಿ ಎಂಬ ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ. ಇದರಿಂದ ಜೆಡಿಎಸ್ ಶಾಸಕರಲ್ಲೇ ಹಲವು ರೀತಿಯ ಗೊಂದಲ ಏರ್ಪಟ್ಟಿದ್ದು, ಜೆಡಿಎಸ್​ ಪಕ್ಷವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಒಟ್ಟಾರೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ರಾಜ್ಯದ ಹಾಲಿ ಹಾಗೂ ಮಾಜಿ ಸಿಎಂಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಉಂಟು ಮಾಡಿದೆ.

ABOUT THE AUTHOR

...view details