ಬೆಂಗಳೂರು: ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿ ಕಾರ್ಯಕ್ರಮಗಳ ತ್ವರಿತ, ಪರಿಣಾಮಕಾರಿ ಅನುಷ್ಠಾನಕ್ಕೆ ಸ್ಥಾಪಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಶಕ್ತಿ ತುಂಬಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 10 ಹುದ್ದೆಗಳ ಸ್ಥಳಾಂತರ, ವಿವಿಧ ವೃಂದದ 14 ಹುದ್ದೆಗಳನ್ನು ಹೊಸದಾಗಿ ಸೃಜಿಸುವ ಮೂಲಕ ಒಟ್ಟು 24 ಹುದ್ದೆಗಳನ್ನು ಎಸ್‌ಟಿ ಕಲ್ಯಾಣ ಸಚಿವಾಲಯಕ್ಕೆ ಒದಗಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಆದೇಶಿಸಿದೆ.
ಸಚಿವಾಲಯಕ್ಕೆ ಪ್ರಧಾನ ಕಾರ್ಯದರ್ಶಿ ಸೇರಿ ವಿವಿಧ ಶ್ರೇಣಿಯ 35 ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಕೋರಿದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅಭಿಪ್ರಾಯ ಕೇಳಲಾಗಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಹುದ್ದೆಗಳ ಸ್ಥಳಾಂತರ ಮತ್ತು 14 ಹುದ್ದೆಗಳನ್ನು ಹೊಸದಾಗಿ ಸೃಜಿಸುವುದಕ್ಕೆ ಹಣಕಾಸು ಇಲಾಖೆ ಅನುಮೋದಿಸಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ, ಹಿರಿಯ ಸಹಾಯಕರು, ಸಹಾಯಕರು, ಕಿರಿಯ ಸಹಾಯಕರು, ಡಿಇಒ ದರ್ಜೆ ತಲಾ ಒಂದು ಹುದ್ದೆ, ಗ್ರೂಪ್ ಡಿ ಮೂರು ಹುದ್ದೆಗಳು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯಕ್ಕೆ ಸ್ಥಳಾಂತರವಾಗಲಿವೆ. ಹೊಸದಾಗಿ ಸೃಜಿಸಿದ 14 ಹುದ್ದೆಗಳ ಪೈಕಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಐಎಎಸ್ ಅಧಿಕಾರಿ ನಿಯೋಜನೆಯಾಗಲಿದ್ದಾರೆ. ಎಂಟು ಹುದ್ದೆಗಳನ್ನು ವೃಂದ ಮತ್ತು ನೇಮಕ ನಿಯಮಗಳನ್ವಯ ಭರ್ತಿ ಮಾಡಿಕೊಳ್ಳಲಿದ್ದು, ಡಿಇಒ ಹಾಗೂ ಗ್ರೂಪ್ ಡಿ ತಲಾ ಎರಡು ಮತ್ತು ಒಂದು ವಾಹನ ಚಾಲಕ ಹುದ್ದೆ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.