ಬೆಂಗಳೂರು: ಹಿಜಾಬ್ ಸಂಘರ್ಷದ ನಡುವೆ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಶುರುವಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಇಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ಇಂದಿನಿಂದ ಏಪ್ರಿಲ್ 11 ರವರಗೆ ನಡೆಯಲಿದ್ದು, 10:30 ರಿಂದ 1:30 ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ. ನಿನ್ನೆ ಜಿಲ್ಲೆಯ ಡಿಸಿ, ಸಿಇಒ ಗಳು ಶಿಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ಒಟ್ಟು 8,73,846 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಓದಿ:ಎಸ್ಎಸ್ಎಲ್ಸಿ ಪರೀಕ್ಷೆ: ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ
ಇನ್ನು ಸಮವಸ್ತ್ರ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ಕೆಲ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೇ ಬಂದರೆ, ಮತ್ತೆ ಕೆಲ ವಿದ್ಯಾರ್ಥಿಗಳು ಹಿಜಾಬ್, ಬುರ್ಖಾ ಧರಿಸಿ ಬಂದಿದ್ದರು. ಅವರಿಗಾಗಿ ವಿಶೇಷ ಕೊಠಡಿ ನಿಯೋಜನೆ ಮಾಡಲಾಗಿದೆ. ಅಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಮತ್ತು ಹಿಜಾಬ್ ತೆಗೆದು ಸಮವಸ್ತ್ರದಲ್ಲೇ ಪರೀಕ್ಷೆ ಬರೆಯಲು ತೆರಳಿದರು.
ನಮಗೆ ಹಿಜಾಬ್ಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂದ ತಾಯಿ ಮಕ್ಕಳ ಪೋಷಕರು ಪ್ರತಿಕ್ರಿಯೆ:ನಾಬೀನ್ ಆರಾ ಎನ್ನುವವರು ಮಾತಾನಾಡಿದ್ದು, ಈ ಕಾಲದಲ್ಲಿ ಎಜುಕೇಶನ್ ಅನ್ನೋದು ತುಂಬಾ ಮುಖ್ಯ. ಹಿಜಾಬ್ ಅಂತ ಕೆಲವರು ಮಾತ್ರ ಹಠ ಮಾಡುತ್ತಿದ್ದಾರೆ. ಅಂತಹವರಿಗೆ ನಾನು ಹೇಳೋದು ಒಂದೇ, ಶಿಕ್ಷಣ ಮುಖ್ಯ. ನಾಲ್ಕು ಜನ ಸೇರುವ ಕಡೆ ಅಲ್ಲಿನ ರೂಲ್ಸ್ ಪಾಲನೆ ಮಾಡಬೇಕು. ಖಾಸಗಿ ಕಾರ್ಯಕ್ರಮಗಳಲ್ಲಿ ಹಿಜಾಬ್ ಹಾಕೋದು ಬೇಡ ಅನ್ನೋದು ಅವರ ವೈಯಕ್ತಿಕ. ಆದ್ರೆ ಶಾಲೆಗಳಲ್ಲಿ ಸಮವಸ್ತ್ರ ಇದ್ರೆ ಪಾಲನೆ ಮಾಡಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ಮುಖ್ಯ ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ದಾರಿ ತಪ್ಪಿಸಬಾರದು. ಮೊದಲು ಅವರಿಗೆ ಶಿಕ್ಷಣ ಆದ್ಯತೆ ಆಗಲಿ. ಮಗುವಿನ ಬಗ್ಗೆ ಯೋಚನೆ ಮಾಡ್ಬೇಕು. ಸುರಕ್ಷತೆ ಇಲ್ಲ ಅನ್ನೋ ಕಡೆ ಹಿಜಾಬ್ ಧರಿಸಿ. ಇದು ಪರೀಕ್ಷಾ ಕೇಂದ್ರ. ಎಲ್ಲ ಸುರಕ್ಷತೆ ಇದೆ. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೇ ಮಕ್ಕಳು ಕಂಗಾಲಾಗಿದ್ದಾರೆ. ಎರಡಮೂರು ವರ್ಷದ ನಂತರ ಎಕ್ಸಾಂ ಬಂದಿದೆ. ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಎಕ್ಸಾಂಗೆ ಹಿಜಾಬ್ ಇಲ್ಲದೇ ಕಳಿಸಿ ಅಂತ ಮನವಿ ಮಾಡಿದರು.
ಹೆಚ್ಡಿಕೆ ಮಾತು:ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೂ ನನ್ನ ಶುಭ ಹಾರೈಕೆಗಳು. ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂಬುದು ನನ್ನ ಕಳಕಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಕ್ಕಳಿಗೆ ಶುಭ ಹಾರೈಸಿದ್ದಾರೆ.
ಓದಿ:ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕಪಾಳಕ್ಕೆ ಹೊಡೆದ ನಟ ವಿಲ್ ಸ್ಮಿತ್: ಕಾರಣ?
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಕೆಲ ದಿನಗಳಲ್ಲಿ ಉಂಟಾದ ಅಹಿತಕರ ಘಟನೆಗಳ ಬಗ್ಗೆ ಮಕ್ಕಳು ತಲೆಕೆಡಿಸಿಕೊಳ್ಳುವುದು ಬೇಡ. ಭವಿಷ್ಯ ಮುಖ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು. ಪೋಷಕರು ಕೂಡ ನಿರ್ಲಕ್ಷ್ಯ ಮಾಡಬಾರದು. ಎಳೆ ಮನಸ್ಸಿನ ಮಕ್ಕಳ ಮೇಲೆ ಭಾವನೆಗಳನ್ನು ಹೇರುವುದು ಬೇಡ ಎಂದು ಹೇಳಿದ್ದಾರೆ.
ಎಲ್ಲ ಸಮುದಾಯಗಳ ಮಕ್ಕಳು ತಮ್ಮ ಭಾವನೆಗಳನ್ನು ಬದಿಗಿರಿಸಿ ಪರೀಕ್ಷೆ ಬರೆಯಬೇಕು. ಯಾವುದೇ ಕಾರಣಕ್ಕೂ ಪರೀಕ್ಷೆ ತಪ್ಪಿಸುವುದು ಬೇಡ. ಮುಂದಿನ ದಿನಗಳಲ್ಲಿ ಮಕ್ಕಳ ಭಾವನೆಗಳನ್ನು ಗೌರವಿಸಿ ಉಂಟಾಗಿರುವ ತ್ವೇಷಮಯ ವಾತಾವರಣ ತಿಳಿಗೊಳಿಸುವ ಸಂದರ್ಭ ಬಂದೇ ಬರುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.
ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ. ʼಬೇಟಿ ಬಚಾವೋ, ಬೇಟಿ ಪಡಾವೋʼ ಕಾರ್ಯಕ್ರಮ ಕೇವಲ ಕಾಗದ ಮೇಲೆ ಅಥವಾ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಹೆಣ್ಣುಮಗುವಿಗೆ ಶಿಕ್ಷಣ ಕೊಡದಿದ್ದರೆ ದೇಶವನ್ನು ಕತ್ತಲೆಗೆ ದೂಡಿದಂತೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.