ಕರ್ನಾಟಕ

karnataka

ETV Bharat / state

ಜು.19, 22 ರಂದು SSLC ಪರೀಕ್ಷೆ.. ಯಾವ ಪರೀಕ್ಷೆ ಯಾವಾಗ: ಇಲ್ಲಿದೆ ಸಂಪೂರ್ಣ ವಿವರ - ಜು.19, 22 ರಂದು SSLC ಪರೀಕ್ಷೆ

ಪ್ರಸಕ್ತ ವರ್ಷದ ಎಸ್ಎಸ್​ಎಲ್​ಸಿ ಪರೀಕ್ಷೆ ನಡೆಸಲು ಕೊನೆಗೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಸಚಿವ ಸುರೇಶ್​ ಕುಮಾರ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.

Karnataka SSLC Exam
Karnataka SSLC Exam

By

Published : Jun 28, 2021, 4:00 PM IST

ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಜು.19 ಮತ್ತು ಜು.22ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಅನೇಕ ವಿಚಾರ ಹಂಚಿಕೊಂಡರು.

ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಎರಡು ದಿನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಜು.19ರಂದು ಸೋಮವಾರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜು. 22ರಂದು ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿರಿ: ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ - ಸಚಿವ ಸುರೇಶ್‌ ಕುಮಾರ್‌

ಯಾವ ಪರೀಕ್ಷೆ ಯಾವ ದಿನ?

  1. ಜುಲೈ 19: ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
  2. ಜುಲೈ 22: ಹಿಂದಿ, ಇಂಗ್ಲೀಷ್​, ಕನ್ನಡ( ಭಾಷಾ ವಿಷಯಗಳು)

ಬಹುಆಯ್ಕೆ ಮಾದರಿಯಲ್ಲಿ(Objective type) ಪ್ರಶ್ನೆ ಪತ್ರಿಕೆ

ಬಹು ಆಯ್ಕೆ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ OMR ಶೀಟ್​​ ನೀಡಲಾಗುತ್ತದೆ. ಕಳೆದ ವರ್ಷದ ಪರೀಕ್ಷೆ ಹಬ್ಬದ ರೀತಿ ನಡೆದು ಭಯ ದೂರ ಮಾಡಲಾಗಿತ್ತು. ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ. ಪರೀಕ್ಷೆಗಳು ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ವರ್ಷ 8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, 73,066 ಪರೀಕ್ಷಾ ಕೇಂದ್ರಗಳ ಕೊಠಡಿಗಳು ಇರಲಿವೆ. ಕಳೆದ ವರ್ಷ 8.46 ಲಕ್ಷ ವಿದ್ಯಾರ್ಥಿಗಳು ಇದ್ದರು ಎಂದು ಹೇಳಿದರು.ಆರೋಗ್ಯ ಇಲಾಖೆ ವಿಸ್ತೃತವಾದ ಎಸ್ಒಪಿ ನೀಡಿದ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಖಜಾನೆ ಅಧಿಕಾರಿ, ಸಿಇಒಗಳ ಜೊತೆ ಮಾತನಾಡಿ ಸಹಕಾರ ಕೋರಲಾಗಿದೆ.

ಕಳೆದ ವರ್ಷ ಆರು ದಿನ ಪರೀಕ್ಷೆ ಮಾಡಿದ್ದೆವು. ನಡೆಸಿದ ರೀತಿ‌ ಮೆಚ್ಚುಗೆ ಗಳಿಸಿದ್ದಲ್ಲದೆ, ಅವಘಡ ಉಂಟಾಗಿರಲಿಲ್ಲ. ವಿಶೇಷ ಸಂದರ್ಭದಲ್ಲಿ ಈ ಸಾರಿಯ ಪರೀಕ್ಷೆ ಮಾಡುತ್ತಿದ್ದೇವೆ. ಆತ್ಮವಿಶ್ವಾಸ, ಆತ್ಮಸ್ಥೈರ್ಯ ತುಂಬಲು ಪರೀಕ್ಷೆ‌ ನಡೆಸಲು ತೀರ್ಮಾನಿಸಿದ್ದೇವೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ

ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಇರಲಿದೆ. ಎಲ್ಲರಿಗೂ ವ್ಯಾಕ್ಸಿನೇಷನ್‌ ಕಡ್ಡಾಯವಾಗಿದ್ದು, ಜು. 30ಕ್ಕೆ ಹಾಲ್ ಟಿಕೆಟ್ ನೀಡುತ್ತೇವೆ. ಮಕ್ಕಳಿಗೆ ಸರ್ಜಿಕಲ್ ಇಲ್ಲವೇ ಉತ್ತಮ ಬಟ್ಟೆಯ ಮಾಸ್ಕ್ ನೀಡಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗ ಸೂಚನೆ ಇದ್ದ ಮಕ್ಕಳಿಗೆ ಎನ್-95 ಮಾಸ್ಕ್ ನೀಡಲಾಗುವುದು.

ಪ್ರತಿ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರವೂ ಇರಲಿದೆ. ಪರೀಕ್ಷಾ ವೀಕ್ಷಕರಿಗೆ ಮಾಸ್ಕ್ ಕಡ್ಡಾಯ, ಫೇಸ್ ಶೀಲ್ಡ್ ಬಳಸಿದರೂ ಉತ್ತಮ. ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಅವಕಾಶವಿರಲಿದೆ. ಸ್ಕೌಟ್ಸ್ ಆ್ಯಂಡ್ ಗೈಡ್​ನ ಸಹಕಾರವಿರಲಿದ್ದು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಪೊಲೀಸ್ ಭದ್ರತೆ ಸಹ ಇರಲಿದೆ ಎಂದು ಸಚಿವರು ತಿಳಿಸಿದರು.

ಪೇಪರ್ ಲೀಕ್ ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಹಾಗೂ ಮುಂಚಿತವಾಗಿ ಎಚ್ಚರಿಕೆ ನೀಡಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಸರಳವಾಗಿರಲಿದ್ದು, ಪಾವಿತ್ರ್ಯತೆಯೂ ಮುಖ್ಯ ಎಂದು ತಿಳಿಸಲಾಗಿದೆ.ಎಲ್ಲಾ ಸಿಬ್ಬಂದಿ ಬೆಳಗ್ಗೆ 8.30ಕ್ಕೆ ಇರಲು ಸೂಚಿಸಲಾಗಿದೆ.

ಅಕಸ್ಮಾತ್ ಯಾವುದೇ ಶಿಕ್ಷಕರಲ್ಲಿ ರೋಗ ಲಕ್ಷಣ ಕಂಡುಬಂದರೆ ಅವರನ್ನು ವಾಪಸ್ ಕಳಿಸಿ, ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ. ಬರುವಾಗ, ತೆರಳುವಾಗ ಮಕ್ಕಳಿಗೆ ಸ್ಯಾನಿಟೈಸ್​​ ಮಾಡಿಸುತ್ತೇವೆ. ಸಾಮಾಜಿಕ ಅಂತರಕ್ಕೂ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮೊದಲ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿ ಎಂದೇ ಪರಿಗಣಿಸಿ ನಂತರದ ಅವಕಾಶ ನೀಡುತ್ತೇವೆ ಎಂದು ಸಚಿವ ಸುರೇಶ್​ಕುಮಾರ್​ ವಿವರಿಸಿದರು.

ABOUT THE AUTHOR

...view details