ಬೆಂಗಳೂರು:ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, ಇತರ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುತ್ತಿದೆ. ಈ ಮೂಲಕ ಈವರೆಗೆ 764.48 ಆದಾಯ ಗಳಿಸಿದೆ. ಒಂದು ಕಾಲದಲ್ಲಿ ವಿದ್ಯುತ್ ಕೊರತೆ ಎದುರಿಸುತ್ತಿದ್ದ ರಾಜ್ಯ, ಇದೀಗ ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು ಎಂಬ ಗುರಿ ಹೊಂದಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.
831 ಮಿ.ಯೂ. ವಿದ್ಯುತ್ ಮಾರಾಟ: ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಬರೋಬ್ಬರಿ 831.53 ಮಿಲಿಯನ್ ಯೂನಿಟ್ ವಿದ್ಯುತ್ನನ್ನು ಇತರ ರಾಜ್ಯಗಳಿಗೆ ಮಾರಾಟ ಮಾಡಿದೆ. ಈ ಮೂಲಕ ಸುಮಾರು 764.48 ಕೋಟಿ ರೂ. ಆದಾಯ ಗಳಿಸಿದೆ. ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (PCKL) ಕಂಪನಿ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ವಿತರಣಾ ಕಂಪನಿಗಳ ಹೆಚ್ಚುವರಿ ವಿದ್ಯುತ್ ಅನ್ನು, ವಿದ್ಯುತ್ ವಿನಿಮಯ ಕೇಂದ್ರದ (IEX & PXIL) ಮೂಲಕ ಮಾರಾಟ ಮಾಡುತ್ತಿದೆ. ಸಾಂಪ್ರದಾಯಿಕ ಹಾಗೂ ನವೀಕರಿಸಬಹುದಾದ ವಿದ್ಯುತ್ ಅನ್ನು ಮಾರಾಟ ಮಾಡಲಾಗಿದೆ.
ಪ್ರಸಕ್ತ 2022-23ನೇ ಸಾಲಿನಲ್ಲಿ ಮೇ.15 ರವರೆಗೆ 831.24 ಮಿ.ಯೂ. ನಷ್ಟು ವಿದ್ಯುತ್ ಅನ್ನು ಸರಾಸರಿ 9.19 ರೂ. ಪ್ರತಿ ಯೂನಿಟ್ ನಂತೆ ಒಟ್ಟು 764.23 ಕೋಟಿ ರೂ. ಮೊತ್ತದಷ್ಟು ಮಾರಾಟ ಮಾಡಲಾಗಿದೆ. ಪ್ರಮುಖವಾಗಿ ತಮಿಳುನಾಡು, ವೇದಾಂತ, ಒಡಿಶಾ, ಕಲ್ಕತ್ತ ವಿದ್ಯುತ್ ಕಂಪನಿ, ದೆಹಲಿ, ಭಾರತ್ ಅಲ್ಯೂಮಿನಿಯಂ ಹಾಗೂ ಬಿಹಾರಕ್ಕೆ ವಿದ್ಯುತ್ ಮಾರಾಟ ಮಾಡಲಾಗಿದೆ.