ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಒಂದೇ‌ ದಿನ 100 ಸೋಂಕಿತರು ಬಲಿ.. 9,886 ಮಂದಿಗೆ ಪಾಸಿಟಿವ್‌ - ಕರ್ನಾಟಕ ಕೋವಿಡ್​

ಕೋವಿಡ್ ಸೋಂಕಿನ ಶೀಘ್ರ ಪತ್ತೆಗೆ ಮತ್ತು ಸೋಂಕಿನ ಸರಪಳಿ ಮುರಿಯಲು ಹಾಗೂ ಮರಣದ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಈ ರೀತಿಯ ರೋಗಿಗಳನ್ನು ಉಚಿತ ಕೋವಿಡ್ ಪರೀಕ್ಷೆಗಾಗಿ ಹತ್ತಿರದ ಫೀವರ್ ಕ್ಲಿನಿಕ್ ಕೇಂದ್ರಕ್ಕೆ ಅಥವಾ ಸ್ವ್ಯಾಬ್ ಸಂಗ್ರಹ ಕೇಂದ್ರಕ್ಕೆ ಕಳಿಸಿಕೊಡಲು ಸೂಚಿಸಿದೆ..

covid
ಕೊರೊನಾ

By

Published : Oct 3, 2020, 8:43 PM IST

ಬೆಂಗಳೂರು :ರಾಜ್ಯದಲ್ಲಿಂದು ಕೊರೊನಾಗೆ 100 ಸೋಂಕಿತರು ಬಲಿಯಾಗಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೋವಿಡ್​ ಸಾವಿನ‌ ಸಂಖ್ಯೆ 9,219ಕ್ಕೆ ಏರಿದೆ. 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 9,886 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ ಕೋವಿಡ್​ ಪ್ರಕರಣಗಳ ಒಟ್ಟು ಸಂಖ್ಯೆ 6,30,516ಕ್ಕೆ ಏರಿದೆ.

ಇಂದು ಒಂದೇ ದಿನ 8,989 ಮ‌ಂದಿ ಗುಣಮುಖರಾಗಿದ್ದು, ಈವರೆಗೆ 5,08,495 ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 1,12,783 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 841 ಮಂದಿ ತೀವ್ರ ನಿಗಾ ಘಟಕದಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 1,96,212 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಖಾಸಗಿ ಆಸ್ಪತ್ರೆ ವಿರುದ್ಧ ಮತ್ತೆ ದಂಡ ಪ್ರಯೋಗ :ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿಡ್ ಸಂಬಂಧಿತ ಎಲ್ಲಾ ವಿವರಗಳನ್ನು ಫೆಸಿಲಿಟಿ ಆ್ಯಫ್ (facility App)ಗೆ ಅಪ್ಲೋಡ್ ಮಾಡಲು ಸೂಚಿಸಲಾಗಿತ್ತು. ಆದರೆ, ಪದೇಪದೆ ಸೂಚಿಸಿದ್ರೂ ವಿಳಂಬ ಮಾಡುತ್ತಿರುವ ಆಸ್ಪತ್ರೆಗಳಿಗೆ ದಂಡ ಪ್ರಯೋಗ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳಿಗೆ ILI, SARI ರೋಗಿಗಳ ಕಡ್ಡಾಯ ಕೊರೊನಾ‌ ಪರೀಕ್ಷೆ ಮಾಡುವಂತೆ ಆದೇಶಿಸಿದೆ.

ಕೋವಿಡ್ ಸೋಂಕಿನ ಶೀಘ್ರ ಪತ್ತೆಗೆ ಮತ್ತು ಸೋಂಕಿನ ಸರಪಳಿ ಮುರಿಯಲು ಹಾಗೂ ಮರಣದ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಈ ರೀತಿಯ ರೋಗಿಗಳನ್ನು ಉಚಿತ ಕೋವಿಡ್ ಪರೀಕ್ಷೆಗಾಗಿ ಹತ್ತಿರದ ಫೀವರ್ ಕ್ಲಿನಿಕ್ ಕೇಂದ್ರಕ್ಕೆ ಅಥವಾ ಸ್ವ್ಯಾಬ್ ಸಂಗ್ರಹ ಕೇಂದ್ರಕ್ಕೆ ಕಳಿಸಿಕೊಡಲು ಸೂಚಿಸಿದೆ.

ಪ್ಲಾಸ್ಮಾ ಪ್ರೊಸೆಸಿಂಗ್ ಚಾರ್ಜ್ ನಿಗದಿಪಡಿಸಿದ ಸರ್ಕಾರ :‌ಕೋವಿಡ್-19 ಸೋಂಕಿನಿಂದ ಗುಣಮುಖರಾದವರಿಂದ ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಪಡೆದ ರಕ್ತದಿಂದ ಪ್ಲಾಸ್ಮಾ ಪ್ರತ್ಯೇಕಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಪ್ಲಾಸ್ಮಾ ದಾನ ಮಾಡಿದಲ್ಲಿ ಅವರಿಗೆ ಪೌಷ್ಠಿಕಾಂಶದ ಭತ್ಯೆಯಾಗಿ 5,000 ರೂ. ನೀಡಲು ಜುಲೈ 15ರಂದು ಸರ್ಕಾರಿ ಆದೇಶ ಹೊರಡಿಸಲಾಗಿತ್ತು.

ಇದೀಗ ದಾನಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಲು ಬಳಸುವ ಕಿಟ್​ಗಳ ದರ ನಿಗದಿಪಡಿಸಲಾಗಿದೆ. ಮಾನವ ಸಂಪನ್ಮೂಲದ ಅಗತ್ಯತೆ ಪರಿಗಣಿಸಿ, ಸೆಪ್ಟೆಂಬರ್ 21ರ ಸಭೆಯಂತೆ ಕಾರ್ಯಪಡೆ ಸಮಿತಿಯು ಅನುಮೋದಿಸಿರುವಂತೆ ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯಗಳಲ್ಲಿ ದಾನಿಗಳಿಂದ ಪಡೆದ ರಕ್ತದಿಂದ ಒಂದು ಯುನಿಟ್‌ ಪ್ಲಾಸ್ಮಾವನ್ನು ಪ್ರತ್ಯೇಕಿಸುವ ಪ್ರಕ್ರಿಯೆಗೆ ರೂ. 7,500 ಶುಲ್ಕ ನಿಗದಿಪಡಿಸಿ ಆದೇಶಿಸಿದೆ.

ABOUT THE AUTHOR

...view details