ಬೆಂಗಳೂರು:ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಆಗುತ್ತಿರುವ ಸಮೃದ್ಧ ಮಳೆಯಿಂದಾಗಿ ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಕಾವೇರಿ ನೀರು ಹರಿಸಲಾಗಿದೆ. ಐತೀರ್ಪನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಸಕ್ತ ಜಲ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳವರೆಗೆ ಹರಿಸಬೇಕಾಗಿದ್ದ 101 ಟಿಎಂಸಿ ನೀರಿನ ಬದಲು ನಾಲ್ಕು ಪಟ್ಟು ಹೆಚ್ಚಿನ ಪ್ರಮಾಣದ ಅಂದರೆ 416 ಟಿಎಂಸಿ ನೀರನ್ನು ಹರಿಬಿಡಲಾಗಿದೆ.
ಕರ್ನಾಟಕ ರಾಜ್ಯವು ನಿರೀಕ್ಷೆಗೂ ಮೀರಿದ ನೀರು ಬಿಟ್ಟಿದ್ದರಿಂದ ಪ್ರತಿ ವರ್ಷ ಹೆಚ್ಚಿನ ಕಾವೇರಿ ನೀರು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್
ಮೂಲಕ ಒತ್ತಡ ಹೇರುತ್ತಿದ್ದ ತಮಿಳುನಾಡು ಸರ್ಕಾರವು ಈ ವರ್ಷ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಧ್ವನಿ ಎತ್ತದೇ ಮೌನವಾಗಿದೆ.
ನ್ಯಾಯಾಲಯದ ಆದೇಶ:ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿ ನೀಡಿದ ಆದೇಶದಂತೆ ಕರ್ನಾಟಕವು ಪ್ರತಿ ಸಾಮಾನ್ಯ ಜಲವರ್ಷದಲ್ಲಿ (ಜೂನ್ 1ರಿಂದ ಮೇ 31ರವರೆಗೆ) 177.25 ಟಿಎಂಸಿ ನೀರನ್ನು ತಮಿಳುನಾಡಿನ ಬಿಳಿಗುಂಡ್ಲು ಜಲಾಶಯಕ್ಕೆ ನೀರು ಸೇರುವಂತೆ ಹರಿಸಬೆಕು. ಯಾವ ಯಾವ ತಿಂಗಳಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನೂ ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ನಿಗದಿಪಡಿಸಿದೆ. ಅಷ್ಟೇ ಅಲ್ಲ, ಕಾವೇರಿ ನೀರು ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಸಾರಥ್ಯದಲ್ಲಿ ನೀರು ನಿರ್ವಹಣೆ ಪ್ರಾಧಿಕಾರ ರಚಿಸಿದೆ.
ಹೆಚ್ಚುವರಿ ಕಾವೇರಿ ನೀರು ಬಿಡುಗಡೆ: ಪ್ರತಿ ತಿಂಗಳು ಕನಿಷ್ಠ ಪ್ರಮಾಣದಲ್ಲಿ ಇಂತಿಷ್ಟೇ ನೀರು ಬಿಡಬೇಕು ಎನ್ನುವುದು ನಿಗದಿಯಾಗಿದೆ. ಆ ಪ್ರಕಾರ ಜೂನ್ನಿಂದ ಸೆಪ್ಟೆಂಬರ್ ಎರಡನೇ ವಾರದ ಅಂತ್ಯಕ್ಕೆ 101 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ 416 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ನಿಗದಿಗಿಂತಲೂ 315 ಟಿಎಂಸಿಯಷ್ಟು ನೀರನ್ನು ಹೆಚ್ಚುವರಿಯಾಗಿ ಹರಿಸಲಾಗಿದೆ.
ಇದನ್ನೂ ಓದಿ:ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧ: ಸಚಿವ ಹಾಲಪ್ಪ ಆಚಾರ್
ಸಂಪೂರ್ಣ ಜಲ ವರ್ಷದಲ್ಲಿ ಜೂನ್ 1ರಿಂದ ಮೇ ತಿಂಗಳ 31ರ ಒಳಗೆ ಹರಿಸಬೆಕಾಗಿದ್ದ 177.25 ಟಿಎಂಸಿ ನೀರನ್ನು ಕರ್ನಾಟಕ ರಾಜ್ಯವು ಕಳೆದ ಆಗಸ್ಟ್ ತಿಂಗಳೊಂದರಲ್ಲಿಯೇ 226 ಟಿಎಂಸಿಯಷ್ಟು ನೀರನ್ನು ಬಿಡುಗಡೆಮಾಡಿರುವುದು ವಿಶೇಷವಾಗಿದೆ.