ಬೆಂಗಳೂರು :ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಔಷಧಿ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಂಡ್ರೂ ಔಷಧಿ ಕೊರತೆ ಇದ್ದೇ ಇದೆ.
ನಿನ್ನೆವರೆಗೆ ಕೇಸಿನ ಆಧಾರದ ಮೇಲೆ ಔಷಧ ಪೂರೈಕೆ ಮಾಡಲಾಗ್ತಿತ್ತು. ಈಗ ಅಗತ್ಯತೆಯ ಅನುಗುಣವಾಗಿ ಔಷಧ ಪೂರೈಕೆ ಮಾಡ್ತಿದ್ದೇವೆ ಅಂತ ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದರು.
ಮಹಾಲಕ್ಷ್ಮಿಲೇಔಟ್‌ನ ಎಂ ಜಿ ನಗರದ ಸ್ಲಂ ನಿವಾಸಿಗಳಿಗೆ ಡಾ. ಹೆಚ್ ಎಂ ಪ್ರಸನ್ನ ಫೌಂಡೇಶನ್ ವತಿಯಿಂದ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಮೊದಲು ರೆಮ್ಡಿಸಿವಿರ್ ಹೇಗೆ ಪೂರೈಕೆ ಮಾಡಲಾಗ್ತಿತ್ತು, ಆ ರೀತಿ ಬ್ಲ್ಯಾಕ್ ಫಂಗಸ್ಗೆ ನೀಡುವ ಔಷಧಿ ಪೂರೈಕೆ ಮಾಡಲು ಸಾಧ್ಯವಾಗ್ತಿಲ್ಲ. ಯಾರು ಈ ಸೋಂಕಿಗೆ ಒಳಗಾಗ್ತಾರೋ ಅವರ ದೂರವಾಣಿ ಸಂಖ್ಯೆ ಪಡೆದು ಔಷಧ ನೀಡ್ತಿದ್ದೇವೆ ಎಂದ್ರು.
ನಿನ್ನೆಯವರೆಗೆ 10,600 ವೈಯಲ್ಸ್ ರಾಜ್ಯಕ್ಕೆ ಕೊಡಲಾಗಿದೆ. ಸೋಂಕು ತಗುಲಿರುವ ವ್ಯಕ್ತಿಗೆ ಕನಿಷ್ಠ 60 ಡೋಸ್ ಬೇಕು. ಸದ್ಯ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಬಳಿಕ ಕರ್ನಾಟಕ ಬ್ಲ್ಯಾಕ್ ಫಂಗಸ್ ಕೇಸಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ 5 ಕಂಪನಿಗಳಿಗೆ ಉತ್ಪಾದನೆಗೆ ಅನುಮತಿ ನೀಡಿದ್ದೇವೆ.
ಅದರ ಉತ್ಪಾದನಾ ಕೆಲಸ ಶುರುವಾಗ್ತಿದೆ, ಮೈಲಾನ್ ಕಂಪನಿಯವರು ಮೂರು ಲಕ್ಷ ವೈಯಲ್ಸ್ ಆಮದು ಮಾಡಿಕೊಳ್ತಿದ್ದಾರೆ. ಇದರಲ್ಲಿ 80,000 ವೈಯಲ್ಸ್ ಬಂದಿದೆ.
ನಾಳೆ ಒಂದು ದೊಡ್ಡ ಬ್ಯಾಚ್ ಔಷಧ ಬರಲಿದ್ದು, ಅದನ್ನ ಎಲ್ಲಾ ರಾಜ್ಯಗಳಿಗೆ ಕಳಿಸಿಕೊಡ್ತೇವೆ. ಎರಡು ಮೂರು ದಿನದಲ್ಲಿ ಎಲ್ಲವೂ ಸರಿ ಹೋಗತ್ತೆ ಅಂತ ತಿಳಿಸಿದರು.
ರಾಜ್ಯ ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದ್ರೂ ಇದರಲ್ಲಿ ಎರಡು ಕಂಪನಿ ಭಾಗವಹಿಸಿದ್ವು. ಆ ಎರಡು ಕಂಪನಿಗಳು ಡಿಸ್ ಕ್ವಾಲಿಫೈ ಆಗಿವೆ. ಬ್ಲ್ಯಾಕ್ ಫಂಗಸ್ ವಿಚಾರ ಕೇಂದ್ರ ಸರ್ಕಾರ ಗಂಭೀರವಾಗಿ ಆಗಿ ತೆಗೆದುಕೊಂಡಿದೆ.
ಔಷಧ ಪೂರೈಕೆ ಮಾಡುವ ವಿಚಾರಕ್ಕೆ ಹೆಚ್ಚು ಗಮನ ಹರಿಸಿದ್ದೇವೆ. ಈಗಾಗಲೇ ರೆಮ್ಡಿಸಿವಿರ್ ಡಿಮ್ಯಾಂಡ್ ಕಡಿಮೆ ಆಗಿದೆ. ಹೀಗಾಗಿ, ಹಂಚಿಕೆ ಆಗಿರುವ ರೆಮ್ಡಿಸಿವಿರ್‌ನ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು.
ಸ್ಟೋರೇಜ್ ಮಾಡಿ ಇಡುವುದು ಸೂಕ್ತ, ಮೂರನೇ ವೇವ್ಗೆ ಉಪಯೋಗವಾಗಬಹುದು. ಬಳಕೆ ವೇಸ್ಟ್ ಆದರೂ ಪರವಾಗಿಲ್ಲ, ಜನರ ಹಿತದೃಷ್ಟಿಯಿಂದ ಸ್ಟೋರೇಜ್ ಮಾಡುವುದು ಸೂಕ್ತ ಅಂತ ತಿಳಿಸಿದರು.
ಸರ್ಕಾರದ ವಿರುದ್ಧ ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ :ಸರ್ಕಾರದ ವಿರುದ್ಧ ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದು,ಯಾವುದೇ ಆರೋಪ-ಪ್ರತ್ಯಾರೋಪಕ್ಕೆ ನಾವು ಪ್ರತಿಕ್ರಿಯೆ ನೀಡಬೇಕಿಲ್ಲ.
ಈಗ ಕೋವಿಡ್ ಬಗ್ಗೆ ನಾವು ಹೆಚ್ಚು ಗಮನ ಕೊಡಬೇಕಿದೆ.. ಅಲ್ಲಿ ಅವ್ರು ಆರೋಪ ಮಾಡಿದ್ರು, ಇಲ್ಲಿ ಆರೋಪ ಮಾಡಿದ್ರು ಅಂತ ಮಾತನಾಡಲು ಇದು ಸೂಕ್ತ ಸಮಯ ಅಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚೆ ಮಾಡೋಣ. ಸದ್ಯ ನಮ್ಮ ಗಮನ ಕೋವಿಡ್ ಮಾತ್ರ ಅಂತ ಜಾರಿಕೊಂಡರು.
ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಕೆ. ಗೋಪಾಲಯ್ಯ ಭಾಗಿಯಾಗಿ ದಿನಸಿ ಕಿಟ್ ವಿತರಿಸಿದರು. 25 ಸಾವಿರ ಜನರಿಗಾಗುವಷ್ಟು ದಿನಸಿ ತರಿಸಿ ಕಿಟ್ ವಿತರಿಸಲಾಯ್ತು.