ಬೆಂಗಳೂರು:ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಭಾಷೆಯ ಬಳಕೆಗೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ. ಈಗಾಗಲೇ ಮಸೂದೆ ಮಂಡನೆ ಮಾಡಿದ್ದೇವೆ. ಈ ಮೂಲಕ ಕನ್ನಡ ಭಾಷೆಯ ಬಳಕೆ ಕನ್ನಡ ಕಾನೂನು ಬದ್ಧವಾಗಲಿದೆ. ಕನ್ನಡಕ್ಕೆ ಕಾನೂನಿನ ರಕ್ಷಣೆ, ಕವಚ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಮೊದಲಿಗೆ ನಾಡಿನ ಜನತೆಗೆ 67ನೇ ರಾಜ್ಯೋತ್ಸವದ ಶುಭಾಶಯ ಕೋರಿದರು.
ಕನ್ನಡ ನಾಡು, ಪುಣ್ಯದ ಬೀಡು. ಈ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯ ಮಾಡಿರಬೇಕು. ಕನ್ನಡ ನಾಡು ನಿಸರ್ಗದತ್ತ ನಾಡು. ಇಲ್ಲಿ ಉತ್ತಮ ಮಳೆ, ನದಿ, ಬೆಳೆ ಎಲ್ಲವೂ ಇದೆ. ಕನ್ನಡ ನೆಲ ವಿವಿಧ ನಾಡಿನಲ್ಲಿ ಹಂಚಿಹೋಗಿದ್ದು, ಸ್ವಾತಂತ್ರ್ಯ ನಂತರ ಜೋಡಿಸುವ ಕೆಲಸ ಮಾಡಲಾಯಿತು. ಮುಂಬೈ ಕರ್ನಾಟಕ, ನಿಜಾಮರ ಕರ್ನಾಟಕ, ಮದ್ರಾಸ್ ಪ್ರಾಂತ್ಯ ಎಲ್ಲವನ್ನೂ ಸೇರಿಸಿ ಒಂದು ರಾಜ್ಯ ಮಾಡಿ ಎನ್ನುವ ಏಕೀಕರಣದ ಹೋರಾಟ ನಡೆಯಿತು. ಹಾಲೂರು ವೆಂಕಟರಾಯರು, ನಿಜಲಿಂಗಪ್ಪ, ಸಾಹುಕಾರ್ ಚನ್ನಯ್ಯ ಹಲವಾರು ಪ್ರಮುಖರು ಇದಕ್ಕೆ ಧುಮಿಕಿದರು. ಇದಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮುಖ್ಯ. ಕನ್ನಡದ ಮನಸ್ಸುಗಳು ಒಂದಾಗಬೇಕು ಅಂತ ಕರೆ ನೀಡಿದ್ದರು. ಕನ್ನಡ ಏಕೀಕರಣಗೊಂಡು ಆರೂವರೆ ದಶಕಗಳಿಗೂ ಹೆಚ್ಚು ಸಮಯವಾಗಿದೆ. ಈಗ ಪ್ರತಿಯೊಬ್ಬ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ನಾಡಿಗೆ ನನ್ನ ಕೊಡುಗೆ ಏನು ಅನ್ನೋದು ಅರಿಯಬೇಕು. ಕನ್ನಡ ನಾಡಿನ ಬಗ್ಗೆ ಆಲೋಚನೆ ಮಾಡಿದರೆ ವಿಶ್ವದಲ್ಲೇ ಮೊದಲ ರಾಜ್ಯ ನಮ್ಮದಾಗಲಿದೆ ಎಂದರು.