ಕರ್ನಾಟಕ

karnataka

ETV Bharat / state

Karnataka Rain: ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ.. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - ಬೆಂಗಳೂರು ಮಳೆ

Karnataka Rain: ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲೂ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Karnataka Rain
ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ

By ETV Bharat Karnataka Team

Published : Sep 5, 2023, 7:02 AM IST

ಬೆಂಗಳೂರು:ರಾಜ್ಯದಲ್ಲಿನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಸೆಪ್ಟಂಬರ್ 7 ಮತ್ತು 8 ರಂದು ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 8ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಖ್ಯವಾಗಿ ಉತ್ತರ ಒಳನಾಡಿನ 6 ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಿಗೆ ಯೆಲ್ಲೋ ಅಲರ್ಟ್ ಮುಂದುವರಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೀದರ್ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 7 ರಿಂದ 9ರ ವರೆಗೆ ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆ.7 ಮತ್ತು 8 ರಂದು ಕಲಬುರಗಿ, ವಿಜಯಪುರ, ಕೊಡಗು ಮತ್ತು ಕೇವಲ ಸೆ.7 ರಂದು ಯಾದಗಿರಿ ಮತ್ತು ಅದರ ಮುಂದಿನ ದಿನ ರಾಯಚೂರು, ಚಾಮರಾಜನಗರ ಮೈಸೂರು ಜಿಲ್ಲೆಗಳಿಗೆ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಗರಿಷ್ಠ ಮಳೆ:ಸೋಮವಾರ ರಾಜ್ಯಾದ್ಯಂತ ಹಲವೆಡೆ ಮಳೆಯಾಗಿದೆ. ನಿನ್ನೆ ರಾಜ್ಯದಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕ್ರಮವಾಗಿ ತಲಾ 8 ಮತ್ತು 7 ಸೆಂ.ಮೀ ಮಳೆ ದಾಖಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ ಇಲ್ಲ:ಉತ್ತರ ಒಳನಾಡಿನ ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ವ್ಯಾಪಕವಾಗಿ ಸೋಮವಾರ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆ ಸುರಿದಿದೆ. ಕರಾವಳಿಯ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದರೂ, ಈ ದಿನಗಳಲ್ಲಿ ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಸಿಲಿಕಾನ್ ಸಿಟಿಯಲ್ಲಿ ಮಳೆ:ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೆಳಗಿನಿಂದ ಮೋಡ ಕವಿದ ವಾತಾವರಣ ಇತ್ತು, ರಾತ್ರಿ ವೇಳೆ ಅಲ್ಲಲ್ಲಿ ಜಿಟಿಜಿಟಿ ಮಳೆ ಸುರಿದಿದೆ. ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ/ರಾತ್ರಿಯ ವೇಳೆಗೆ ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಲಬುರಗಿಯಲ್ಲಿ ಮಹಿಳೆ ಸಾವು: ಕಲಬುರಗಿಯಲ್ಲಿ ಕಳೆದೆರಡು ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ಸಿಡಿಲು ಬಡಿದು ಅಫಜಲಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ಜಮೀನಿನಲ್ಲಿದ್ದ ಮಹಿಳೆ ಕಲಾವತಿ ಚಿಕ್ಕರೇವೂರು (35) ಮೃತಪಟ್ಟಿದ್ದಾರೆ. ಹಾಗೆಯೇ ಇನ್ನೊಬ್ಬರು ಗಾಯಗೊಂಡಿದ್ದಾರೆ. ಕೊರವಿ ಗ್ರಾಮದಲ್ಲಿ ಕಟ್ಟಡ ಕುಸಿದು 150ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ.. ಸಿಡಿಲು ಬಡಿದು ಮಹಿಳೆ ಸಾವು

ABOUT THE AUTHOR

...view details